ಸಿಂಗಾಪುರ: ಸ್ವಲ್ಪ ಪುಶ್-ಅಪ್ ಮಾಡೋ ಅಷ್ಟರಲ್ಲಿ ಅಯ್ಯೋ ಸುಸ್ತು ಅಂತೀವಿ. ಆದ್ರೆ ಇಲ್ಲೊಬ್ಬರು 60 ನಿಮಿಷದಲ್ಲಿ 951 ಬರ್ಪಿಸ್ ವ್ಯಾಯಾಮ ಮಾಡುವ ಮೂಲಕ ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದಾರೆ.
ಹೌದು, ಬ್ರೆಜಿಲ್ ಮೂಲದ ಕ್ಯಾಸಿಯಾನೊ ರೋಡ್ರಿಗಸ್ ಲಾರೆನೊ ಅವರು ಈ ಸಾಧನೆ ಮಾಡಿದ್ದಾರೆ. ಸಿಂಗಾಪುರದ ಜಿಮ್ ಒಂದರಲ್ಲಿ 951 ಬರ್ಪಿಸ್ ವ್ಯಾಯಾಮ ಮಾಡಿದ ಬಳಿಕ ಹೊಟ್ಟೆ ಕೆಳಗಾಗಿ ನೆಲದ ಮೇಲೆ ಮಲಗಿದ ಅವರು, ‘ನಾನು ದಣಿದಿದ್ದೇನೆ’ ಎಂದು ಹೇಳಿದ್ದಾರೆ. ಈ ವೇಳೆ ನೆರೆದಿದ್ದವರು ಈತನ ಸಾಧನೆಗೆ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
ರಾಯಿಟರ್ಸ್ ಹಾಗೂ ಇತರೆ ಸುದ್ದಿಸಂಸ್ಥೆಗಳು ಈತನ ಸಾಧನೆಯ ವಿಡಿಯೋ ಚಿತ್ರೀಕರಣ ಮಾಡಿ ಹಂಚಿಕೊಂಡಿವೆ. ಕ್ಯಾಸಿಯಾನೊ 1000 ಬರ್ಪೀಸ್ ವ್ಯಾಯಾಮ ಮಾಡಬೇಕು ಅಂತಾ ಅಂದುಕೊಂಡಿದ್ದರಂತೆ. ಆದರೆ ಎರಡು ದಿನಗಳ ಹಿಂದೆ ಕಾಲಿಗೆ ಗಾಯ ಮಾಡಿಕೊಂಡಿದ್ದರಿಂದ 951 ಮಾಡಲಷ್ಟೇ ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.
ಇನ್ನು ಕ್ಯಾಸಿಯಾನೊ ಅವರ ವೈಯಕ್ತಿಕ ಕಾರಣಗಳಿಂದಾಗಿ ಈ ದಾಖಲೆ ಮಾಡಲು ನಿರ್ಧಾರ ಮಾಡಿದ್ದಂತೆ. ಈತನ ಸೋದರಸೊಸೆ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಹೆಚ್ಚಿನ ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆಯಂತೆ. ಹೀಗಾಗಿ 2019ರಲ್ಲಿ ಸಿಂಗಾಪುರಕ್ಕೆ ಬಂದು ನೆಲೆಸಿದ್ದಾರೆ. ಈ ಮೂಲಕ ಲಾರೆನೊ ಈ ಹಿಂದಿನ 879 ಇದ್ದ ದಾಖಲೆಯನ್ನು ಪುಡಿಗಟ್ಟಿ ಹೊಸ ದಾಖಲೆಗೆ ಪಾತ್ರರಾಗಿದ್ದಾರೆ.