ಏರ್ ಇಂಡಿಯಾದಲ್ಲಿ ಈವರೆಗೆ 3523 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಹಾಗೂ ಇದರಲ್ಲಿ 56 ಮಂದಿ ಸಿಬ್ಬಂದಿ ಕೋವಿಡ್ನಿಂದ ಸಾವನ್ನಪ್ಪಿದ್ದಾರೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕಾಂಗ್ರೆಸ್ ಸಂಸದ ರವನೀತ್ ಬಿಟ್ಟುರ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದೆ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವ ವಿ.ಕೆ ಸಿಂಗ್, ಒಟ್ಟು 3523 ಏರ್ ಇಂಡಿಯಾ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ ಹಾಗೂ ಇದರಲ್ಲಿ ಜುಲೈ 14ರವರೆಗಿನ ಅಂಕಿ ಅಂಶಗಳ ಪ್ರಕಾರ 56 ಮಂದಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕಿನಿಂದ ತೀವ್ರವಾಗಿ ಹಾನಿಗೊಳಗಾಗಿರುವ ವಿಮಾನಯಾನ ಸಿಬ್ಬಂದಿಗೆ ಕೇಂದ್ರ ಸರ್ಕಾರ ಏನಾದರೂ ಪರಿಹಾರ ನೀಡುತ್ತಿದೆಯೇ ಎಂಬ ಕಾಂಗ್ರೆಸ್ ಸಂಸದನ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿ.ಕೆ ಸಿಂಗ್, ವಿಮಾನಯಾನ ಸಿಬ್ಬಂದಿಯ ಸುರಕ್ಷತೆಗಳನ್ನ ಗಮನದಲ್ಲಿರಿಸಿ ಕೋವಿಡ್ ಸೋಂಕಿಗೆ ತುತ್ತಾದ ಸಿಬ್ಬಂದಿಗೆ 17 ದಿನಗಳ ಕ್ವಾರಂಟೈನ್ ರಜೆಯನ್ನ ನೀಡಲಾಗುತ್ತಿದೆ. ಕೋವಿಡ್ನಿಂದ ಮೃತರಾದ ಖಾಯಂ ಹಾಗೂ ಗುತ್ತಿಗೆ ಆಧಾರಿತ ಸಿಬ್ಬಂದಿಯ ಕುಟುಂಬಸ್ಥರಿಗೆ ಕ್ರಮವಾಗಿ 10,00,000 ರೂ ಹಾಗೂ 5,00,000 ರೂಪಾಯಿ ಪರಿಹಾರ ನೀಡುತ್ತಿದ್ದೇವೆ. ಅಲ್ಲದೇ ಖಾಯಂ ಹಾಗೂ ಗುತ್ತಿಗೆ ಆಧಾರಿತ ನೌಕರರ ಎರಡು ತಿಂಗಳ ಸಂಬಳಕ್ಕೆ 90 ಸಾವಿರ ರೂಪಾಯಿಗಳ ಪರಿಹಾರವನ್ನೂ ನೀಡಿದ್ದೇವೆ ಎಂದು ಹೇಳಿದ್ದಾರೆ.
ಅಲ್ಲದೇ ಕೊರೊನಾ ಸೋಂಕಿತ ಸಿಬ್ಬಂದಿಯ ಸುರಕ್ಷತೆಗಾಗಿ ವಿವಿಧ ಕಡೆಗಳಲ್ಲಿ ಕೋವಿಡ್ ಕೇಂದ್ರಗಳನ್ನೂ ತೆರೆಯಲಾಗಿದೆ. ಏರ್ಲೈನ್ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರಿಗೆ ಕಂಪನಿಯ ಹಣದಿಂದಲೇ ಲಸಿಕೆಯನ್ನೂ ಕೊಡಿಸಲಾಗಿದೆ ಎಂದು ಹೇಳಿದ್ದಾರೆ.