ನನ್ನನ್ನು ಮುಟ್ಟಿದರೆ ಅಲ್ಲೋಲ ಕಲ್ಲೋಲವಾಗುತ್ತದೆ ಎಂಬ ಸಂದೇಶವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಗೆ ರವಾನಿಸಿದ್ದಾರೆ.
ಸರ್ಕಾರ ರಚನೆಗೆ ಕಾರಣರಾಗಿದ್ದ ಮಿತ್ರಮಂಡಳಿ ಸಚಿವರು ಈಗಾಗಲೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ಬೆಳವಣಿಗೆಯೊಂದಿಗೆ ತಮ್ಮ ಪದಚ್ಯುತಿಗೆ ಮುಂದಾದರೆ ಸರ್ಕಾರಕ್ಕೆ ಗಂಡಾಂತರ ಉಂಟಾಗಲಿದೆ ಎಂಬುದನ್ನು ಬಿಂಬಿಸಲು ಹೊರಟಿದ್ದಾರೆ ಎನ್ನಲಾಗಿದೆ.
ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದ ಸಿಎಂ, ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿದ್ದರೂ ಮಿತ್ರಮಂಡಳಿ ಸಚಿವರ ರಾಜೀನಾಮೆ ಅಸ್ತ್ರದ ಮೂಲಕ ದೆಹಲಿ ಹೈಕಮಾಂಡ್ ಗೆ ಸ್ಪಷ್ಟವಾದ ಸಂದೇಶ ರವಾನಿಸಿದ್ದಾರೆ.
ಹೊಸ ಸರ್ಕಾರ ರಚನೆಯಾಗಿ ಹೊಸ ಮುಖ್ಯಮಂತ್ರಿ ಬಂದರೆ ಹೊಸದಾಗಿ ಮಂತ್ರಿಮಂಡಲ ರಚನೆಯಾಗಲಿದೆ. ಆ ಸಂದರ್ಭದಲ್ಲಿ ಸರ್ಕಾರ ರಚನೆಗೆ ಕಾರಣರಾಗಿರುವ ಬಾಂಬೆ ಮಿತ್ರಮಂಡಳಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು, ಈ ಕಾರಣಕ್ಕೆ ಬಿ.ಎಸ್.ವೈ. ಬೆಂಬಲಿಸಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ದೆಹಲಿ ಕಡೆಗೆ ಮೊದಲಿಗೆ ಸ್ವಾಮೀಜಿಗಳ ಅಸ್ತ್ರ ಪ್ರಯೋಗಿಸಿದ್ದ ಸಿಎಂ ಯಡಿಯೂರಪ್ಪ ಇದರ ಬೆನ್ನಲ್ಲೇ ಮಿತ್ರಮಂಡಳಿ ಸಚಿವರ ರಾಜೀನಾಮೆ ಅಸ್ತ್ರವನ್ನು ಬಿಟ್ಟಿದ್ದಾರೆ ಎನ್ನಲಾಗಿದೆ.