ಬೆಂಗಳೂರು: ಪೆಗಾಸಸ್ ಗೂಢಾಚಾರಿಕೆ ಹಗರಣ ಖಂಡಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು ಬಳಿಕ ರಾಜಭವನ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ತಡೆದ ಪೊಲೀಸರು, ವಶಕ್ಕೆ ಪಡೆದುಕೊಂಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಡೈರೆಕ್ಟರ್‌ಗೆ ಶಾಕ್ ನೀಡಿದ ಸಂಘಟಕರು
ಪೆಗಾಸಸ್ ಗೂಢಾಚಾರಿಕೆ ಮೂಲಕ ಕೇಂದ್ರ ಸರ್ಕಾರ ವಿಪಕ್ಷವನ್ನು ಆದ್ಯತೆ ಮೇರೆಗೆ ಟಾರ್ಗೆಟ್ ಮಾಡುತ್ತಿದ್ದು, ಎಲ್ಲಾ ರಾಜ್ಯಗಳ ನಾಯಕರ ಫೋನ್ ಕದ್ದಾಲಿಕೆ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅಲ್ಲದೇ ಹಗರಣವನ್ನು ತನಿಖೆಗೆ ಒಪ್ಪಿಸಿದರೆ ತಮ್ಮ ಬಂಡವಾಳ ಬಯಲಾಗಲಿದೆ ಎಂಬ ಕಾರಣಕ್ಕೆ ತನಿಖೆಗೆ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ಎಲ್ಲಾ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಬೇಕು ಎಂಬ ದುರುದ್ದೇಶದಿಂದ ಕಾಂಗ್ರೆಸ್ ನಾಯಕರನ್ನು ಮಣಿಸುವ ನಿಟ್ಟಿನಲ್ಲಿ ಪೆಗಾಸಸ್ ಬೇಹುಗಾರಿಕೆ ಅಸ್ತ್ರ ಪ್ರಯೋಗಿಸಿದೆ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.