ಬೆಂಗಳೂರು: ಶಾಲೆ ಆರಂಭ ವಿಚಾರವಾಗಿ ಎರಡು ದಿನದಲ್ಲಿ ಆಯುಕ್ತರ ವರದಿ ಕೈಸೇರಲಿದೆ. ವರದಿ ಕೈ ಸೇರಿದ ಬಳಿಕ ಚರ್ಚಿಸಿ ಶಾಲೆ ಆರಂಭದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತಂತೆ ಶಿಕ್ಷಣ ಇಲಾಖೆ ಆಯುಕ್ತರು ಇನ್ನೆರಡು ದಿನದಲ್ಲಿ ವರದಿ ಸಲ್ಲಿಸಲಿದ್ದಾರೆ. ವರದಿ ಬಂದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಐಸಿಎಂಆರ್ ಕೂಡ ಶಾಲೆಗಳನ್ನು ತೆರೆಯಬಹುದು ಎಂದು ಸಲಹೆ ನೀಡಿದೆ. ಆಗಸ್ಟ್ ಮೊದಲ ವಾರದಲ್ಲಿ 10, 12 ನೇ ತರಗತಿಯನ್ನು ಮೊದಲು ಆರಂಭಿಸಿ ನಂತರ ಉಳಿದ ತರಗತಿಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಶೀಘ್ರವೇ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಹೇಳಲಾಗಿದೆ.
ಇನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಮಕ್ಕಳ ಕಲಿಕೆ ಮತ್ತು ಭವಿಷ್ಯದ ದೃಷ್ಟಿಯಿಂದ ಶೀಘ್ರವೇ ಶಾಲೆಗಳನ್ನು ಪುನಾರಂಭಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಶಾಲೆ ಆವರಣದಲ್ಲಿ ಲಿಸಿಕೆ ಶಿಬಿರ ಆಯೋಜಿಸುವುದಾಗಿ ತಿಳಿಸಿದ್ದಾರೆ.