ನೌಕರರರ ಭವಿಷ್ಯ ನಿಧಿಯಲ್ಲಿ ಅನೇಕ ಬದಲಾವಣೆಗಳನ್ನ ಮಾಡಿರೋದ್ರಿಂದ ನೌಕರರಿಗೆ ತಮ್ಮ ಇಪಿಎಫ್ ಖಾತೆಯಿಂದ ಅವಧಿಗೂ ಮುನ್ನವೇ ಹಣ ಪಡೆದುಕೊಳ್ಳೋದು ಈಗ ಹಿಂದೆಂದಿಗಿಂತ ಸುಲಭವಾಗಿದೆ. ಆನ್ಲೈನ್ನಲ್ಲಿ ನೌಕರರು ತಮ್ಮ ಭವಿಷ್ಯ ನಿಧಿಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹಣವನ್ನ ಪಡೆದುಕೊಳ್ಳಬಹುದಾಗಿದೆ.
ಡಿಸೆಂಬರ್ 2018ರಲ್ಲಿ ತಿಂಗಳೊಳಗಾಗಿ ಕೆಲಸವನ್ನ ತ್ಯಜಿಸಿದರೂ ಸಹ ನೌಕರರು 75 ಪ್ರತಿಶತದಷ್ಟು ಹಣವನ್ನ ಪಡೆದುಕೊಳ್ಳಬಹುದು ಎಂದು ಹೊಸ ನಿಯಮ ತರಲಾಗಿತ್ತು. ಅದೇ ನೌಕರ 2 ತಿಂಗಳುಗಳ ಕಾಲ ಬೇರೆ ಉದ್ಯೋಗವನ್ನ ಹೊಂದುವಲ್ಲಿ ಯಶಸ್ವಿಯಾಗದೇ ಹೋದಲ್ಲಿ ಆತ ಸಂಪೂರ್ಣ ಹಣವನ್ನ ಭವಿಷ್ಯ ನಿಧಿಯಿಂದ ಪಡೆದುಕೊಳ್ಳಬಹುದಾಗಿದೆ. ಆದರೆ ಭವಿಷ್ಯ ನಿಧಿಯಿಂದ ಹಣ ಡ್ರಾ ಮಾಡುವ ಮುನ್ನ ನೀವು ಕೆಲವೊಂದಿಷ್ಟು ಮುಖ್ಯ ಅಂಶಗಳನ್ನ ತಲೆಯಲ್ಲಿ ಇಟ್ಟುಕೊಳ್ಳೋದು ಅನಿವಾರ್ಯವಾಗಿದೆ.
1. 5 ವರ್ಷಗಳ ಸೇವಾ ಅವಧಿಯನ್ನ ಪೂರೈಸದೇ ಹೋದಲ್ಲಿ ಇಪಿಎಫ್ನಿಂದ ಪಡೆದುಕೊಳ್ಳುವ ಹಣವು ತೆರಿಗೆ ವ್ಯಾಪ್ತಿಯಲ್ಲಿ ಬರಲಿದೆ.
2. ಹಿಂದಿನ ಕಂಪನಿಯಿಂದ ಪಿಎಫ್ ಹಣವನ್ನ ಪ್ರಸ್ತುತ ಕಂಪನಿಗೆ ನೀವು ವರ್ಗಾವಣೆ ಮಾಡಿದ್ದಲ್ಲಿ ಹಿಂದಿನ ಕಂಪನಿಯಲ್ಲಿ ನೀವು ಸೇವೆ ಸಲ್ಲಿಸಿದ ಅವಧಿಯು ಪ್ರಸ್ತುತ ಉದ್ಯೋಗ ಅವಧಿಗೆ ಸೇರಿಕೊಳ್ಳಲಿದೆ.
3. ಒಟ್ಟು ನೀವು ಸೇವೆ ಸಲ್ಲಿಸಿದ ಅವಧಿ 5 ವರ್ಷಗಳಿಂದ ಕಡಿಮೆ ಇದ್ದಲ್ಲಿ , ನೀವು ಭವಿಷ್ಯ ನಿಧಿಯಿಂದ ಪಡೆದುಕೊಂಡ ಹಣವು ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರಲಿದೆ.
4. ನಿಮ್ಮ ಇಪಿಎಫ್ ಖಾತೆಯಲ್ಲಿರುವ ಹಣವು ನಾಲ್ಕು ಭಾಗಗಳನ್ನ ಹೊಂದಿರುತ್ತದೆ, ನೌಕರರ ಕೊಡುಗೆ, ಕಂಪನಿಯ ಕೊಡುಗೆ, ಎರಡೂ ಕೊಡುಗೆಗಳ ಹಣದ ಮೇಲೆ ನೀವು ಪಡೆದ ಬಡ್ಡಿ.
5. ಐದು ವರ್ಷಗಳ ಸೇವಾ ಅವಧಿ ಪೂರ್ಣಗೊಳ್ಳುವ ಮುನ್ನ ನೀವು ಭವಿಷ್ಯ ನಿಧಿಯಿಂದ ಹಣವನ್ನ ಪಡೆದಿದ್ದಲ್ಲಿ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಇದನ್ನ ಸಂಬಳ ಎಂದೇ ಪರಿಗಣಿಸಲಾಗುತ್ತದೆ.
6. ಐದು ವರ್ಷಗಳ ಅವಧಿಗೂ ಮುನ್ನ ಭವಿಷ್ಯ ನಿಧಿಯ ಮೊತ್ತವನ್ನ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ಇಪಿಎಫ್ಗೆ ನೌಕರರು ತಮ್ಮ ಸ್ವಂತ ಕೊಡುಗೆಯಿಂದ ಪಡೆದ ಬಡ್ಡಿಯನ್ನು ಇತರೆ ಮೂಲಗಳಿಂದ ಬಂದ ಆದಾಯ ಎಂಬ ವಿಭಾಗದ ಅಡಿಯಲ್ಲಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ.
7. ಐದು ವರ್ಷಗಳ ನಿರಂತರ ಸೇವೆಗೂ ಮುನ್ನ ಹಣ ವಾಪಸ್ಸಾತಿಗೆ 10 ಪ್ರತಿಶತ ಟಿಡಿಎಸ್ ವಿಧಿಸಲಾಗುತ್ತದೆ.
8. ಭವಿಷ್ಯ ನಿಧಿಯ ಹಣವು 50 ಸಾವಿರ ರೂಪಾಯಿಗಿಂತ ಕಡಿಮೆ ಇದ್ದು ಕಂಪನಿಯು ತನ್ನ ಕಾರ್ಯಾಚರಣೆ ಬಂದ್ ಮಾಡಿದ್ದಲ್ಲಿ ಟಿಡಿಎಸ್ ಮೊತ್ತವನ್ನ ಕಡಿತಗೊಳಿಸಲಾಗುವುದಿಲ್ಲ.