ಗಂಡನ ವೀರ್ಯವನ್ನು ರಕ್ಷಿಸಿಡಲು ಅನುಮತಿ ಕೋರಿದ್ದ ಮಹಿಳೆಗೆ ಗುಜರಾತ್ ಹೈಕೋರ್ಟ್ ಒಪ್ಪಿಗೆ ನೀಡಿದೆ. ಮೇ ತಿಂಗಳಿನಲ್ಲಿ ಮಹಿಳೆಯ ಪತಿಗೆ ಕೊರೊನಾ ಕಾಣಿಸಿಕೊಂಡಿದೆ. ಕಳೆದ ಎರಡು ತಿಂಗಳಿಂದ ಪತಿ ವೆಂಟಿಲೇಟರ್ ನಲ್ಲಿದ್ದಾರೆ. ಇನ್ನು ಮೂರ್ನಾಲ್ಕು ದಿನ ಮಾತ್ರ ಪತಿ ಬದುಕಿರಲು ಸಾಧ್ಯವೆಂದು ವೈದ್ಯರು ಹೇಳಿದ್ದಾರೆ.
ಇದ್ರಿಂದ ಕುಟುಂಬಸ್ಥರು ಆಘಾತಗೊಂಡಿದ್ದಾರೆ.ಈ ಸಂದರ್ಭದಲ್ಲಿ ಪತ್ನಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಳು. ಗಂಡನ ವೀರ್ಯದಿಂದ ನಾನು ತಾಯಿಯಾಗಲು ಬಯಸಿದ್ದೇನೆ. ಇದು ನಮ್ಮಿಬ್ಬರ ಪ್ರೀತಿ ಉಳಿಯಲು ನೆರವಾಗಲಿದೆ. ಪತಿ ಶ್ವಾಸಕೋಶ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ನಮಗೆ ಕಡಿಮೆ ಸಮಯವಿದೆ. ವೈದ್ಯಕೀಯ ಕಾನೂನು ಇದನ್ನು ಅನುಮತಿಸುತ್ತಿಲ್ಲವೆಂದು ಪತ್ನಿ ಅರ್ಜಿಯಲ್ಲಿ ತಿಳಿಸಿದ್ದಳು. ಮಹಿಳೆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ವೀರ್ಯ ರಕ್ಷಣೆಗೆ ಅನುಮತಿ ನೀಡಿದೆ.
ಇಬ್ಬರು ಕೆನಡಾದಲ್ಲಿ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮಹಿಳೆ ಅತ್ತೆಗೆ ಹೃದಯಾಘಾತವಾಗಿದ್ದರಿಂದ ಭಾರತಕ್ಕೆ ಮರಳಿದ್ದ ಜೋಡಿ, ಇಲ್ಲಿಯೇ ವಾಸ ಶುರು ಮಾಡಿದ್ದರು. ಈ ವರ್ಷ ಮೇ ತಿಂಗಳಿನಲ್ಲಿ ಮಹಿಳೆ ಪತಿಗೆ ಕೊರೊನಾ ಕಾಣಿಸಿಕೊಂಡಿತ್ತು.
ಪತಿ ಇನ್ನು 24 ಗಂಟೆ ಬದುಕಿರ್ತಾರೆಂಬ ಸುದ್ದಿ ಕೇಳ್ತಿದ್ದಂತೆ ಸೋಮವಾರ ಪತ್ನಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರಂತೆ. ಮಂಗಳವಾರ ವಿಚಾರಣೆ ನಡೆಸಿ 15 ನಿಮಿಷದಲ್ಲಿ ಕೋರ್ಟ್ ತೀರ್ಪು ನೀಡಿತ್ತು. ಆದ್ರೆ ಆಸ್ಪತ್ರೆ ಸಿಬ್ಬಂದಿ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲವೆಂದು ಮಹಿಳೆ ಆರೋಪ ಮಾಡಿದ್ದಾಳೆ. ಕೃತಕ ಗರ್ಭಧಾರಣೆಗೆ ನ್ಯಾಯಾಲಯ ಆದೇಶ ನೀಡಿಲ್ಲ. ಮುಂದಿನ ವಿಚಾರಣೆ ಗುರುವಾರ ನಡೆಯಲಿದೆ.