ಹಿಂದೂ ಸಂಪ್ರದಾಯಗಳಲ್ಲಿ ಮದುವೆ ದಿನದಂದು ವಧುವಿನ ಮನೆಯವರು ಆಕೆಗೆ ಉಡುಗೊರೆಗಳನ್ನ ನೀಡಿ ಪತಿಯ ಮನೆಗೆ ಕಳಿಸುವ ಪದ್ಧತಿ ಇದೆ. ನೂತನ ದಂಪತಿಗೆ ಆಶೀರ್ವಾದದ ರೂಪದಲ್ಲಿ ಈ ಉಡುಗೊರೆಗಳನ್ನ ನೀಡಲಾಗುತ್ತದೆ.
ಹೊಸ ಸಂಸಾರ ಆರಂಭಿಸಲು ಮುಂದಾದ ದಂಪತಿಗೆ ನೆರವಾಗಲಿ ಎಂಬ ಕಾರಣಕ್ಕೆ ಅನೇಕರು ವಧುವಿಗೆ ಉಡುಗೊರೆ ರೂಪದಲ್ಲಿ ಮನೆಗೆ ಬೇಕಾದ ಸಾಮಗ್ರಿಗಳನ್ನೇ ನೀಡುವುದುಂಟು. ಇದಾದ ಬಳಿಕ ಸ್ನೇಹಿತರು ಹಾಗೂ ಸಂಬಂಧಿಗಳು ಸಹ ಉಡುಗೊರೆಗಳನ್ನ ನೀಡ್ತಾರೆ.
ಆದರೆ ತೆಲಗು ಸಂಪ್ರದಾಯದ ಪ್ರಕಾರ ಪವಿತ್ರ ತಿಂಗಳು ಎಂದು ಕರೆಸಿಕೊಳ್ಳುವ ಆಷಾಡ ಮಾಸದಲ್ಲಿ ಆಂಧ್ರ ಮೂಲದ ನವವಿವಾಹಿತೆಗೆ ಆಕೆಯ ಕುಟುಂಬಸ್ಥರು ಅತ್ಯಂತ ವಿಚಿತ್ರವಾದ ಉಡುಗೊರೆಗಳನ್ನ ನೀಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದಾರೆ.
ತೆಲಗು ಸಂಪ್ರದಾಯದಲ್ಲಿ ನವವಿವಾಹಿತರ ಪಾಲಿಗೆ ಆಷಾಡ ಮಾಸ ಅತ್ಯಂತ ಪ್ರಮುಖವಾಗಿದೆ. ಈ ಮಾಸದಲ್ಲಿ ನವವಿವಾಹಿತೆಗೆ ಆಕೆಯ ಪೋಷಕರು ಉಡುಗೊರೆಗಳನ್ನ ನೀಡುತ್ತಾರೆ.
ರಾಜಮುಂಡ್ರಿಯ ಉದ್ಯಮಿಯಾಗಿರುವ ಬಟ್ಟುಲಾ ಬಲರಾಮ ಕೃಷ್ಣ ಎಂಬವರು ತಮ್ಮ ಮಗಳಿಗೆ ಆಷಾಢ ಮಾಸದ ಪ್ರಯುಕ್ತ 1000 ಕೆಜಿ ಮೀನು, 10 ಕೆಜಿ ಕುರಿ, 250 ಕೆಜಿ ದಿನಸಿ ಸಾಮಗ್ರಿಗಳು, 250 ಕೆಜಿ ಸಿಹಿ ತಿನಿಸುಗಳನ್ನ ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಪಾಂಡಿಚೆರಿಯ ಯಾನಮ್ನಲ್ಲಿರುವ ತಮ್ಮ ಪುತ್ರಿಯ ನಿವಾಸಕ್ಕೆ ಈ ಉಡುಗೊರೆಗಳನ್ನ ಕಳುಹಿಸಿಕೊಟ್ಟಿದ್ದಾರೆ. ಇದರ ಜೊತೆಯಲ್ಲಿ 250 ಕೆಜಿ ಸಿಗಡಿ ಹಾಗೂ 250 ಭರಣಿ ಉಪ್ಪಿನಕಾಯಿಯನ್ನೂ ಕಳುಹಿಸಿಕೊಟ್ಟಿದ್ದಾರೆ.
ಕೃಷ್ಣರ ಪುತ್ರಿ ಪ್ರತ್ಯುಷಾ ಇತ್ತೀಚೆಗಷ್ಟೇ ಪವನ್ ಕುಮಾರ್ ಎಂಬ ಉದ್ಯಮಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಂದೆ ಕಳುಹಿಸಿದ ಉಡುಗೊರೆಗಳನ್ನ ಕಂಡು ಪ್ರತ್ಯುಷಾ ಶಾಕ್ಗೊಳಗಾಗಿದ್ದಾರೆ. ಆಷಾಡ ಮಾಸದಲ್ಲಿ ಉಡುಗೊರೆಗಳನ್ನ ನೀಡುವುದು ಸರ್ವೇ ಸಾಮಾನ್ಯ ವಿಷಯವಾಗಿದ್ದರೂ ಸಹ ಈ ರೀತಿ ವಿಶಿಷ್ಟ ಉಡುಗೊರೆ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದಾರೆ.