ಬರೋಬ್ಬರಿ 1 ವರ್ಷದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಆಮೆಯೊಂದು ಇದೀಗ ಮನೆಯಿಂದ ಅರ್ಧ ಮೈಲಿ ದೂರದಲ್ಲೇ ಪತ್ತೆಯಾಗಿದೆ. 14 ವರ್ಷದ ಮ್ಯಾಕ್ಸಿ ಎಂಬ ಹೆಸರಿನ ಆಮೆಯು ಇಂಗ್ಲೆಂಡ್ನ ವಿಲ್ಟ್ಶೈರ್ನಲ್ಲಿರುವ ತನ್ನ ಮನೆಯಿಂದ ಕೇವಲ 0.6 ಮೈಲಿ ದೂರದಲ್ಲಿರುವ ಮೈದಾನದಲ್ಲಿ ಪತ್ತೆಯಾಗಿದೆ.
ಸುಸಿ ಥಾಮಸ್ ಹಾಗೂ ಅವರ ನೆರೆಮನೆಯವರಾದ ಲಿಂಡಾ ರೋಜರ್ಸ್ ಈ ಆಮೆಯನ್ನ ಮೊದಲು ಪತ್ತೆ ಮಾಡಿದ್ದಾರೆ. ಇವರು ಆಮೆಯನ್ನ ನೋಡೋದು ಕೆಲವೇ ಕ್ಷಣಗಳು ತಡವಾಗಿದ್ದರೂ ಸಹ ಅದು ಟ್ರ್ಯಾಕ್ಟರ್ ಅಡಿ ಸಿಲುಕುವ ಸಾಧ್ಯತೆ ಇತ್ತು ಎಂದು ಅವರು ಹೇಳಿದ್ದಾರೆ.
ಇವರಿಬ್ಬರು ಮ್ಯಾಕ್ಸಿಯನ್ನ ಮನೆಗೆ ಕರೆದುಕೊಂಡು ಹೋಗಿದ್ದಾರೆ ಹಾಗೂ ಅದಕ್ಕೆ ನೀರನ್ನ ನೀಡಿದ್ದಾರೆ. ಇದಾದ ಬಳಿಕ ಆಮೆ ಮಾಲೀಕರನ್ನ ಪತ್ತೆ ಮಾಡಲು ಫೇಸ್ಬುಕ್ ಸಹಾಯವನ್ನ ಪಡೆದಿದ್ದಾರೆ. ಈ ಆಮೆ ತಮ್ಮದು ಎಂದು ಹೇಳುವ ವ್ಯಕ್ತಿಯು ಆಮೆ ಯಾವ ರೀತಿ ಇದೆ ಹಾಗೂ ಅದರ ಹಳೆಯ ಫೋಟೋವನ್ನ ಕಳಿಸಬೇಕು ಎಂದು ಹೇಳಿದ್ದಾರೆ. ಮೂರು ದಿನಗಳ ಹುಡುಕಾಟದ ಬಳಿಕ ಕೇವಲ ಅರ್ಧ ಮೈಲಿ ದೂರದಲ್ಲೇ ಮ್ಯಾಕ್ಸಿಯ ನಿಜವಾದ ಮಾಲೀಕರಿದ್ದಾರೆ ಎಂದು ತಿಳಿದುಬಂದಿದೆ.