ಕೊರೊನಾ ವೈರಸ್ ವಿಶ್ವದ ಚಿತ್ರಣವನ್ನು ಬದಲಿಸಿದೆ. ಕೊರೊನಾ ಭಯದಲ್ಲಿ ಜನರು ಕಾಲ ಕಳೆಯುವಂತಾಗಿದೆ. ಆಂಧ್ರಪ್ರದೇಶದ ಕುಟುಂಬವೊಂದು ನೆರೆ ಮನೆಯವರ ಕೊರೊನಾ ಸಾವಿಗೆ ಹೆದರಿ 15 ತಿಂಗಳಿಗಿಂತ ಹೆಚ್ಚು ಕಾಲ ಕತ್ತಲ ಕೋಣೆಯಲ್ಲಿ ಕಳೆದಿದೆ.
ಇಂಡಿಯಾ ಟುಡೇ ವರದಿ ಪ್ರಕಾರ, ಕುಟುಂಬದಲ್ಲಿ ಪತಿ-ಪತ್ನಿ, ಒಬ್ಬ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತ್ನಿ ಹಾಗೂ ಮಗಳು 15 ತಿಂಗಳಿಂದ ಮನೆಯಿಂದ ಹೊರ ಬಿದ್ದಿಲ್ಲ. ಪತಿ ಹಾಗೂ ಮಗ ಅವಶ್ಯ ವಸ್ತುಗಳ ಖರೀದಿಗೆ ಮಾತ್ರ ಮನೆಯಿಂದ ಹೊರಗೆ ಬರ್ತಿದ್ದರಂತೆ. ಸಣ್ಣ ಕತ್ತಲ ಕೋಣೆಯಲ್ಲಿ ಬಂಧಿಯಾಗಿದ್ದವರನ್ನು ಪೊಲೀಸರು ರಕ್ಷಿಸಿದ್ದಾರೆ. ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿಯೇ ಇವರು ಕೋಣೆ ಸೇರಿದ್ದರು ಎನ್ನಲಾಗಿದೆ.
50 ವರ್ಷದ ಜಾನಿ ಬೆನ್ನಿ, ಪತ್ನಿ 45 ವರ್ಷದ ರುಥಮ್ಮ್ ಗೆ ಮೂವರು ಮಕ್ಕಳು. ಹೆಣ್ಣು ಮಕ್ಕಳ ವಯಸ್ಸು 30-32 ವರ್ಷ. ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಪಕ್ಕದ ಮನೆಯವರ ಸಾವನ್ನು ನೋಡಿ ಇವರು ಭಯಗೊಂಡಿದ್ದರು. ಅನೇಕ ದಿನಗಳಿಂದ ಕತ್ತಲ ಕೋಣೆಯಲ್ಲಿದ್ದ ಇವರು ಖಿನ್ನತೆಯಿಂದ ಬಳಲುತ್ತಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿದಾಗ ಈ ಸಂಗತಿ ಬಹಿರಂಗವಾಗಿತ್ತು. ಕೊರೊನಾಗೆ ಹೆದರಿ 15 ತಿಂಗಳಿಂದಲೂ ಮನೆ ಮಹಿಳೆಯರು ಮನೆಯಿಂದ ಹೊರ ಬಂದಿಲ್ಲ ಎಂಬ ಸಂಗತಿಯನ್ನು ನೆರೆಯವರು ಹೇಳಿದ್ದರು.