ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಕಾರವಾರ ಶಾಸಕಿ ರೂಪಲಿ ನಾಯ್ಕ್ ಅವರಿಂದ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ದೊಡ್ಡಮಳಲವಾಡಿ ಸಚಿನ್ ಗೌಡ ಬಂಧಿತ ಆರೋಪಿ. ಜುಲೈ 1 ರಂದು ಶಾಸಕಿ ರೂಪಾಲಿ ನಾಯ್ಕ್ ಅವರಿಗೆ ಕರೆ ಮಾಡಿದ ಆರೋಪಿ ತಾನು ಶಾಸಕ ಮಹೇಶ್ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡಿದ್ದಾನೆ. ಶಾಸಕರಿಗೆ ತುರ್ತಾಗಿ 50 ಸಾವಿರ ರೂ. ಅಗತ್ಯವಿದ್ದು ಕೂಡಲೇ ನೀಡುವಂತೆ ಕೇಳಿಕೊಂಡಿದ್ದಾನೆ.
ಈತನ ಮಾತು ನಂಬಿದ ಶಾಸಕಿ ರೂಪಾಲಿ ನಾಯ್ಕ್ ಆನ್ಲೈನ್ ನಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಮಹೇಶ್ ಅವರನ್ನು ಭೇಟಿಯಾಗಿದ್ದ ರೂಪಾಲಿ ಅವರು ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ. ಆಗ ಶಾಸಕ ಮಹೇಶ್ ಹಣ ಪಡೆದುಕೊಂಡಿಲ್ಲ ಎಂದು ತಿಳಿಸಿದ್ದು, ತಮ್ಮ ಹೆಸರಲ್ಲಿ ವಂಚಿಸಿರುವುದು ಗೊತ್ತಾಗಿದೆ. ಕೊಳ್ಳೇಗಾಲ ಪಟ್ಟಣ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿ ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ವಿವರ ಆಧರಿಸಿ ಪೊಲೀಸರು ಬಂಧಿಸಿದ್ದಾರೆ.