
ಟೋಕಿಯೊ ಒಲಿಂಪಿಕ್ಸ್ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿಯಿದೆ. ವಿಶ್ವದ ಅತಿದೊಡ್ಡ ಕ್ರೀಡಾಕೂಟ ಜುಲೈ 23 ರಿಂದ ಜಪಾನ್ ರಾಜಧಾನಿಯಲ್ಲಿ ಪ್ರಾರಂಭವಾಗಲಿದೆ. 109 ವರ್ಷಗಳ ಹಿಂದೆ ಒಲಂಪಿಕ್ಸ್ ಹೇಗಿತ್ತು ಎಂಬ ಮಾಹಿತಿಯನ್ನು ಇಂದು ನಾವು ನೀಡ್ತಿದ್ದೇವೆ. ಸ್ಟಾಕ್ಹೋಮ್ ಒಲಿಂಪಿಕ್ಸ್ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳು ಇಲ್ಲಿವೆ.
1912 ರಲ್ಲಿ ನಡೆದ ಐದನೇ ಒಲಿಂಪಿಕ್ ಕ್ರೀಡಾಕೂಟವನ್ನು ಸ್ವೀಡನ್ನ ರಾಜಧಾನಿ ಸ್ಟಾಕ್ಹೋಮ್ನಲ್ಲಿ ನಡೆಸಲಾಯಿತು. 14 ಕ್ರೀಡೆಗಳಿಗೆ 102 ಸ್ಪರ್ಧೆಗಳು ನಡೆದವು. 48 ಮಹಿಳಾ ಕ್ರೀಡಾಪಟುಗಳು ಸೇರಿದಂತೆ ಆ ವರ್ಷ ಸುಮಾರು 2,400 ಕ್ರೀಡಾಪಟುಗಳು 28 ದೇಶಗಳನ್ನು ಪ್ರತಿನಿಧಿಸಿದ್ದರು.
1912 ರ ಸ್ಟಾಕ್ಹೋಮ್ ಒಲಿಂಪಿಕ್ಸ್ ಗೆ ಮೊದಲ ಬಾರಿಗೆ ಎಲ್ಲಾ ಐದು ಖಂಡಗಳ ಆಟಗಾರರು ಪಾಲ್ಗೊಂಡಿದ್ದರು. ಇದೇ ವರ್ಷ ಆಟೊಮೇಟರ್ ಟೈಮ್ ಟ್ರ್ಯಾಕಿಂಗ್ ಯಂತ್ರಗಳು ಮತ್ತು ಫೋಟೋ ಫಿನಿಶ್ ಪರಿಚಯಿಸಲಾಗಿತ್ತು. ಫಿನ್ಲ್ಯಾಂಡ್ನ ಆಲ್ಫ್ರೆಡ್ ಅಸಿಕಿನೆನ್ ಮತ್ತು ರಷ್ಯಾದ ಮಾರ್ಟಿನ್ ಕ್ಲೈನ್ ನಡುವಿನ ಮಿಡಲ್ ವೇಟ್ ಕುಸ್ತಿಯ ಸೆಮಿಫೈನಲ್ ಪಂದ್ಯವು 11 ಗಂಟೆಗಳಿಗಿಂತ ಹೆಚ್ಚು ಕಾಲ ನಡೆದಿತ್ತು. ಕ್ಲೈನ್ ಕೊನೆಯಲ್ಲಿ ಗೆದ್ದರು.
ಸೈಕ್ಲಿಂಗ್ ಸ್ಪರ್ಧೆಗೆ 320 ಕಿ.ಮೀ. ದೂರವನ್ನು ನಿಗಧಿಪಡಿಸಲಾಗಿತ್ತು. ಕಲಾ ಪ್ರದರ್ಶನ, ಮಹಿಳಾ ಡೈವಿಂಗ್, ಮಹಿಳಾ ಈಜು ಮತ್ತು ಡೆಕಾಥ್ಲಾನ್ ಮತ್ತು ಪೆಂಟಾಥ್ಲಾನ್ ಆಟಗಳಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿತ್ತು.
1912 ರ ಸ್ಟಾಕ್ಹೋಮ್ ಒಲಿಂಪಿಕ್ಸ್ ನಲ್ಲಿ ಕೊನೆಯ ಬಾರಿಗೆ, ಮೊದಲು ಬಂದ ಆಟಗಾರನಿಗೆ ಶೇಕಡಾ 100ರಷ್ಟು ಚಿನ್ನವಿರುವ ಚಿನ್ನದ ಪದಕ ನೀಡಲಾಗಿತ್ತು. ಇದರ ನಂತರ ಈ ನಿಯಮ ಬದಲಾಗಿದೆ. ಐಒಸಿ ಮಾರ್ಗಸೂಚಿಗಳ ಪ್ರಕಾರ, ಚಿನ್ನದ ಪದಕದಲ್ಲಿ ಕನಿಷ್ಠ 6 ಗ್ರಾಂ ಚಿನ್ನ ಇರಬೇಕು. ಚಿನ್ನದ ಪದಕದಲ್ಲಿ ಚಿನ್ನ ಶೇಕಡಾ ಒಂದರಷ್ಟಿದ್ದರೆ ಬೆಳ್ಳಿ ಶೇಕಡಾ 92.5ರಷ್ಟು ಮತ್ತು ತಾಮ್ರ ಶೇಕಡಾ 6.5ರಷ್ಟಿರುತ್ತದೆ.