ಮಂಡ್ಯ: ಮಾಜಿ ಸಂಸದ ಜಿ. ಮಾದೇಗೌಡ(92) ವಿಧಿವಶರಾಗಿದ್ದು, ಇಂದು ಮಂಡ್ಯದ ನಿವಾಸಕ್ಕೆ ಪಾರ್ಥಿವ ಶರೀರ ಸ್ಥಳಾಂತರ ಮಾಡಲಾಗುವುದು.
ಬಂಧಿಗೌಡ ಬಡಾವಣೆಯ ಮನೆಗೆ ಪಾರ್ಥಿವ ಶರೀರ ಸ್ಥಳಾಂತರ ಮಾಡಲಿದ್ದು, ಬಳಿಕ ಗಾಂಧಿಭವನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮದ್ದೂರು ಗ್ರಾಮದ ಗುರುದೇವರಹಳ್ಳಿಯಲ್ಲಿ ಅಂತಿಮ ದರ್ಶನದ ನಂತರ ಭಾರತಿ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಮಧ್ಯಾಹ್ನ 2.30 ಕ್ಕೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹನುಮಂತನಗರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮಾದೇಗೌಡರ ಪುತ್ರ ಮಧು ಮಾದೇಗೌಡ ಮಾಹಿತಿ ನೀಡಿದ್ದಾರೆ.
ಶಿಕ್ಷಣ, ರಾಜಕೀಯ, ಸಾಮಾಜಿಕ, ಹೋರಾಟದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ ಮಾದೇಗೌಡರು ಕಾವೇರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಮಾದೇಗೌಡರ ನಿಧನಕ್ಕೆ ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂಗಳಾದ ಎಸ್.ಎಂ. ಕೃಷ್ಣ, ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.