ವಿವಾಹ ಅನ್ನೋದು ಪ್ರತಿಯೊಬ್ಬರ ಬಾಳಿನಲ್ಲಿ ಸುಂದರ ಕ್ಷಣ. ಈಗಂತೂ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಅಂತೆಲ್ಲಾ ಫೋಟೋಗ್ರಫಿಯದ್ದೇ ಕಾರುಬಾರು. ಇನ್ನು ಮದುವೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು..? ಯಾವ ರೀತಿಯ ಉಡುಗೆ ತೊಡಬೇಕು..? ಹೀಗೆ ವಧುವಿಗೆ ಹತ್ತು ಹಲವು ಚಿಂತೆಯಿರುತ್ತೆ.
ಅಷ್ಟೇ ಅಲ್ಲ ಮದುವೆ ದಿನ ಎಲ್ಲರ ಕಣ್ಣು ಮದುಮಗಳ ಮೇಲೆಯೇ ಇರುವುದರಿಂದ, ಕೆಲವರಿಗೆ ವಿಭಿನ್ನವಾಗಿ ಎಂಟ್ರಿ ಪಡೆಯಬೇಕು ಎನ್ನುವ ಆಕಾಂಕ್ಷೆಯಿರುತ್ತದೆ. ಇದಕ್ಕಾಗಿ ಕೆಲ ಟಿಪ್ಸ್ ಇಲ್ಲಿದೆ ನೊಡಿ.
– ಬುಲೆಟ್ ಬೈಕ್ ನಲ್ಲಿ ಎಂಟ್ರಿ ಪಡೆದರೆ ಒಂಥರಾ ರಾಯಲ್ ಲುಕ್ ಕೊಡುತ್ತದೆ. ಆದರೆ ಅದಕ್ಕೆ ತಕ್ಕುದಾಂತಹ ಬಟ್ಟೆ, ಹೇರ್ ಸ್ಟೈಲ್ ಮಾಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ನೋಡುಗರಿಗೆ ಅಷ್ಟೊಂದು ಚೆನ್ನಾಗಿ ಕಾಣಿಸುವುದಿಲ್ಲ.
– ವಧುವಿನ ಎಂಟ್ರಿಯಾಗುತ್ತಿದ್ದಂತೆ ಆಕೆಯ ಹಿಂದೆ ಮುಂದೆ ನಾಲ್ವರು ಜೊತೆಗೆ ಬರುತ್ತಾ ಸ್ಪಾರ್ಕಲ್ ಲೈಟ್ ಉರಿಸಬೇಕು. ಇದು ಮದುಮಗಳ ಎಂಟ್ರಿ ವೇಳೆ ಒಂದು ಅದ್ಧೂರಿ ಕಳೆ ಬರುತ್ತದೆ.
ದಾಂಪತ್ಯ ಸಮಸ್ಯೆ ದೂರ ಮಾಡುತ್ತೆ ಈ ʼಟಿಪ್ಸ್ʼ
– ಹಿಂದೆಲ್ಲಾ ಮದುಮಗಳನ್ನು ಪಲ್ಲಕ್ಕಿ ಮೇಲೆ ಕೂರಿಸಿ ಕರೆತರುತ್ತಿದ್ದರು. ಹಾಗೆಯೇ ಈಗಿನ ಕಾಲಕ್ಕೆ ತಕ್ಕಂತೆ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು. ಸುಂದರವಾಗಿ ಅಲಂಕೃತಗೊಂಡ ಆಕರ್ಷಕ, ತೆರೆದ ಪಲ್ಲಕ್ಕಿಯಲ್ಲಿ ಕೂರಬೇಕು. ನೋಡುಗರ ಕಣ್ಣು ಕುಕ್ಕುವಂತಿರಬೇಕು.
– ಸಹೋದರನ ಜತೆ ಸಾರೋಟ್ ಎಂಟ್ರಿ ಪಡೆಯಬಹುದು. ಸೈಕಲ್ ಹಿಂದೆ ಸಾರೋಟ್ ತರಹ ಬರುತ್ತದೆಯಲ್ಲಾ ಅಂದ್ರೆ ರಿಕ್ಷಾ ರೀತಿ ಇರುತ್ತದೆ. ಇದಕ್ಕೆ ಹೂವಿನ ಅಲಂಕಾರ ಮಾಡಿ ಎದುರಿನಿಂದ ಸಹೋದರ ಸೈಕಲ್ ತುಳಿದರೆ ಹಿಂದೆ ರಾಣಿಯಂತೆ ನಿಂತು ಫೋಸ್ ಕೊಡುತ್ತಾ ಅಥವಾ ಡ್ಯಾನ್ಸ್ ಮಾಡುತ್ತಾ ಎಂಟ್ರಿ ಕೊಡಬಹುದು.
– ತೆರೆದ ಜೀಪ್ ನಲ್ಲೂ ಕೂಡ ಎಂಟ್ರಿ ಪಡೆದರೆ ಒಂಥರಾ ಮಜಾ ಇರುತ್ತೆ.. ಸಹೋದರರು ಅಥವಾ ಗೆಳೆಯರು ಮುಂದಿನಿಂದ ಬುಲೆಟ್ ಬೈಕ್ ನಲ್ಲಿ ಚಲಾಯಿಸಿದ್ರೆ ಹಿಂದಿನಿಂದ ತೆರೆದ ಜೀಪಿನಲ್ಲಿ ಮದುಮಗಳ ಎಂಟ್ರಿ ಸಖತ್ ಆಗಿ ಕಾಣುತ್ತೆ.
– ಇನ್ನು ಸಾಂಪ್ರಾದಾಯಿಕವಾಗಿ ಪ್ರವೇಶ ಮಾಡಬೇಕು ಅಂತಾ ಅನ್ನಿಸಿದ್ದಲ್ಲಿ, ಸಣ್ಣ ಬೆಡ್ ರೀತಿಯ ನಾಲ್ಕು ಕಾಲುಗಳಿರುವ ವಸ್ತುವನ್ನು ಸಂಪೂರ್ಣವಾಗಿ ಹೂವಿನಿಂದ ಅಲಂಕಾರ ಮಾಡಬೇಕು. ಇದನ್ನು ಮುಂದೆಯಿಂದ ಇಬ್ಬರು ಹಾಗೂ ಹಿಂದೆಯಿಂದ ಇಬ್ಬರು ಗೆಳೆಯರು ಹಿಡಿದು ಬರಬೇಕು. ಮಧ್ಯದಲ್ಲಿ ವಧುವನ್ನು ನಿಲ್ಲಿಸಿ ಕರೆತರಬೇಕು. ಇದೂ ಕೂಡ ನೋಡುಗರಿಗೆ ಬಹಳ ಚೆನ್ನಾಗಿ ಕಾಣಿಸುತ್ತದೆ.
– ಇನ್ನು ಗೆಳತಿಯರು ಅಥವಾ ಸಹೋದರಿಯರ ಜೊತೆ ಮದುವೆ ಮಂಟಪಕ್ಕೆ ಹಾಡು ಹಾಡುತ್ತಾ / ಕುಣಿಯುತ್ತಾ ಎಂಟ್ರಿ ಪಡೆಯುವುದು ಕೂಡ ಸಖತ್ ಲುಕ್ ಕೊಡುತ್ತೆ.
– ಇನ್ನು ಸಿನಿಮೀಯ ರೀತಿಯಲ್ಲಿ ಎಂಟ್ರಿ ಕೊಡಬೇಕು ಅನ್ನಿಸಿದ್ದಲ್ಲಿ, ವರನ ಜತೆಯಲ್ಲಿಯೇ ಬರಬಹುದು. ಇಬ್ಬರು ಡ್ಯಾನ್ಸ್ ಮಾಡುತ್ತಾ ಇಲ್ಲವೇ ಅಲಂಕೃತಗೊಂಡ ಎತ್ತಿನಗಾಡಿಯನ್ನೇರಿ ಕೂಡ ಬರಬಹುದು.
– ಇನ್ನು ವಧುವಿಗೆ ಜಾನಪದ ಕಲೆಯಲ್ಲಿ ಆಸಕ್ತಿಯಿದ್ದಲ್ಲಿ, ಅಂತಹ ಕಲೆ ಪ್ರದರ್ಶಿಸುತ್ತಾ ಕೂಡ ಪ್ರವೇಶಿಸಬಹುದು.