ಕೋವಿಡ್ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಆಂಧ್ರಪ್ರದೇಶ ಸರ್ಕಾರ ಮುಸ್ಲಿಂ ಬಾಂಧವರ ಬಕ್ರೀದ್ ಹಬ್ಬದಾಚರಣೆಗೆ ಮಾರ್ಗಸೂಚಿಯನ್ನ ಪ್ರಕಟಿಸಿದೆ. ಚಂದ್ರ ದರ್ಶನದ ಅನುಗುಣವಾಗಿ ಜುಲೈ 20 ಅಥವಾ 21ರಂದು ಬಕ್ರೀದ್ ಹಬ್ಬ ಆಚರಣೆಯಾಗಲಿದೆ.
ಜನದಟ್ಟಣೆಯನ್ನ ತಪ್ಪಿಸುವ ಸಲುವಾಗಿ ಆಂಧ್ರ ಪ್ರದೇಶ ಸರ್ಕಾರ ಬಕ್ರೀದ್ ಪ್ರಾರ್ಥನೆಯನ್ನು ಈದ್ಗಾ ಮೈದಾನ ಅಥವಾ ತೆರೆದ ಸ್ಥಳಗಳಲ್ಲಿ ನಡೆಸಬಾರದು ಎಂದು ಮಾರ್ಗಸೂಚಿ ಹೊರಡಿಸಿದೆ.
ಸಾಮಾಜಿಕ ಅಂತರವನ್ನ ಕಾಯ್ದುಕೊಂಡು 50 ಜನರಿಗೆ ಮಾತ್ರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಮಸೀದಿಗೆ ಆಗಮಿಸುವ ಪ್ರತಿಯೊಬ್ಬರು ಮಾಸ್ಕ್ ಧರಿಸೋದು ಕಡ್ಡಾಯ ಹಾಗೂ ಮಾಸ್ಕ್ ಧರಿಸದೇ ಬರುವ ಯಾವೊಬ್ಬ ಭಕ್ತರನ್ನ ಮಸೀದಿಯ ಒಳಗೆ ಅನುಮತಿಸುವಂತಿಲ್ಲ ಎಂದು ಮಾರ್ಗಸೂಚಿ ಹೇಳಿದೆ.
ಅಲ್ಲದೇ ಮಸೀದಿಗೆ ಆಗಮಿಸುವ ಪ್ರತಿಯೊಬ್ಬ ಭಕ್ತರು ಪಾರ್ಥನೆ ಮಾಡಲು ಮನೆಯಿಂದಲೇ ಚಾಪೆ ಅಥವಾ ಜಮಖಾನಾವನ್ನ ತರಬೇಕು. ಜ್ವರ, ಶೀತದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು. ಹಾಗೂ ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ, ರಕ್ತದೊತ್ತಡದಿಂದ ಬಳಲುತ್ತಿರುವವರಿಗೂ ಇದೇ ಸೂಚನೆ ಪಾಲಿಸುವಂತೆ ಹೇಳಲಾಗಿದೆ.