ಕೊರೊನಾ ಸೋಂಕು ತಗುಲುವ ಮುನ್ನ ಕನಿಷ್ಟ ಒಂದು ಡೋಸ್ ಲಸಿಕೆಯನ್ನ ಪಡೆದವರೂ ಸಹ ಕೇವಲ ಡೆಲ್ಟಾ ರೂಪಾಂತರಿಯ ದಾಳಿಗೆ ಮಾತ್ರ ತುತ್ತಾಗಿದ್ದಾರೆ ಎಂದು ಐಸಿಎಂಆರ್ನ ಹೊಸ ಅಧ್ಯಯನವು ಹೇಳಿದೆ.
ಕೊರೊನಾ ಲಸಿಕೆಯ ನಂತರದ ಪರಿಣಾಮಗಳ ಬಗ್ಗೆ ಐಸಿಎಂಆರ್ ನಡೆಸಿದ ಅಧ್ಯಯನದ ಮೊದಲ ವಿಶ್ಲೇಷಣೆ ಇದಾಗಿದೆ. ಕೊರೊನಾ ಲಸಿಕೆ ಪಡೆದ ಬಳಿಕ ಸೋಂಕಿಗೆ ಒಳಗಾದವರಲ್ಲಿ ಬಹುತೇಕರಿಗೆ ಡೆಲ್ಟಾ ರೂಪಾಂತರಿಯೇ ತಗುಲಿದೆ ಎಂದು ತಿಳಿದು ಬಂದಿದೆ.
ಅಂದಹಾಗೆ ಕೊರೊನಾ ಲಸಿಕೆಯನ್ನ ಸ್ವೀಕರಿಸಿದವರಲ್ಲಿ ಸಾವಿನ ಪ್ರಮಾಣ ತುಂಬಾನೇ ಕಡಿಮೆ ಇದೆ ಎಂದು ಈ ಅಧ್ಯಯನ ಹೇಳಿದೆ. 677 ಕೊರೊನಾ ಸೋಂಕಿತರಲ್ಲಿ 71 ಮಂದಿ ಕೊವ್ಯಾಕ್ಸಿನ್ ಲಸಿಕೆಯನ್ನ ಪಡೆದವರಾಗಿದ್ದರೆ 604 ಮಂದಿ ಕೋವಿಶೀಲ್ಡ್ ಲಸಿಕೆಯನ್ನ ಸ್ವೀಕರಿಸಿದ್ದರು.ಉಳಿದ ಇಬ್ಬರು ಸೋಂಕಿತರು ಚೀನಾದ ಸಿನೋಫಾರ್ಮ್ ಲಸಿಕೆ ಸ್ವೀಕರಿಸಿದ್ದರು. ಕೊರೊನಾ ಲಸಿಕೆ ಸ್ವೀಕರಿಸಿದವರಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಐಸಿಎಂಆರ್ ಅಧ್ಯಯನದಲ್ಲಿ ತಿಳಿದುಬಂದ ಅಂಶಗಳು :
1. ಐಸಿಎಂಆರ್ನ ಈ ಅಧ್ಯಯನವು ಕೋವಿಡ್ ಪ್ರಕರಣಗಳ ಕ್ಲಿನಿಕಲ್ ಗುಣಲಕ್ಷಣ ಹಾಗೂ ಜೈವಿಕ ವಿಶ್ಲೇಷಣೆಯಾಗಿದ್ದು, ಇದಕ್ಕಾಗಿ ಕೊರೊನಾ ಸೋಂಕು ತಗುಲುವುದಕ್ಕೂ ಮುನ್ನ ಕೊರೊನಾ ಮೊದಲ ಅಥವಾ ಎರಡೂ ಡೋಸ್ಗಳನ್ನ ಪಡೆದವರನ್ನೇ ಅಧ್ಯಯನಕ್ಕೆ ಆಯ್ಕೆ ಮಾಡಲಾಗಿತ್ತು.
2. ಕೊರೊನಾ ಲಸಿಕೆಯನ್ನ ಸ್ವೀಕರಿಸಿದವರಲ್ಲಿ 86.09 ಪ್ರತಿಶತ ಮಂದಿಗೆ ಡೆಲ್ಟಾ ರೂಪಾಂತರಿ (B.1.617.2) ತಗುಲಿದೆ.
3. ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ 9.8 ಪ್ರತಿಶತ ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದರೆ ಕೇವಲ 0.4 ಪ್ರತಿಶತ ಮಾತ್ರ ಸಾವಿನ ಪ್ರಮಾಣ ದಾಖಲಾಗಿದೆ.
4. ಐಸಿಎಂಆರ್ ಅಧ್ಯಯನದಿಂದಾಗಿ ಕೊರೊನಾ ಲಸಿಕೆ ಸ್ವೀಕರಿಸೋದ್ರಿಂದ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹಾಗೂ ಸಾವಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ ಅನ್ನೋದು ತಿಳಿದುಬಂದಿದೆ.
5. ಭಾರತದ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಭಾಗದಿಂದ 677 ಸೋಂಕಿತರನ್ನ ಅಧ್ಯಯನಕ್ಕೆ ಆಯ್ಕೆ ಮಾಡಲಾಗಿತ್ತು. ಇವರೆಲ್ಲರೂ ಆರ್ಟಿ ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಹೊಂದಿದ್ದರು. 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಅಂದರೆ ಮಹಾರಾಷ್ಟ್ರ, ಕೇರಳ, ಗುಜರಾತ್, ಉತ್ತರಾಖಂಡ್, ಕರ್ನಾಟಕ, ಮಣಿಪುರ, ಆಸ್ಸಾಂ, ಜಮ್ಮು ಹಾಗು ಕಾಶ್ಮೀರ, ಚಂಡೀಗಢ, ರಾಜಸ್ಥಾನ, ಮಧ್ಯ ಪ್ರದೇಶ, ಪಾಂಡಿಚೇರಿ, ದೆಹಲಿ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಿಂದ ಸ್ಯಾಂಪಲ್ಗಳನ್ನ ಕಲೆಕ್ಟ್ ಮಾಡಲಾಗಿತ್ತು.
6. 482 ಪ್ರಕರಣಗಳು ಕೊರೊನಾ ಸೋಂಕಿನ ಲಕ್ಷಣಗಳನ್ನ ಹೊಂದಿದ್ದರೆ 29 ಪ್ರತಿಶತ ಪ್ರಕರಣಗಳು ಲಕ್ಷಣ ರಹಿತ ಕೊರೊನಾ ಸೋಂಕು ಹೊಂದಿದ್ದವು.
7. ಜ್ವರ (69%) , ತಲೆನೋವು (56%) , ಕೆಮ್ಮು (45%), ಗಂಟಲು ನೋವು (37%) , ರುಚಿ ಹಾಗೂ ವಾಸನೆ ಕಳೆದುಕೊಳ್ಳುವುದು (22%) , ಉಸಿರಾಟದ ತೊಂದರೆ(62%) ಹಾಗೂ 1 % ಮಾತ್ರ ಕಣ್ಣು ಕೆಂಪಗಾಗುವುದು ಹಾಗೂ ತುರುಸಿವಿಕೆ ಲಕ್ಷಣ ಹೊಂದಿದ್ದರು.
8. ಲಸಿಕೆ ಸ್ವೀಕರಿಸಿದ ಬಳಿಕವೂ ಸೋಂಕು ತಗುಲುವಲ್ಲಿ ಡೆಲ್ಟಾ ಹಾಗೂ ಕಪ್ಪಾ ರೂಪಾಂತರಿಗಳು ಪ್ರಮುಖ ಪಾತ್ರ ವಹಿಸಿದ್ದವು.
9. 71 ಮಂದಿ ಕೋವ್ಯಾಕ್ಸಿನ್ , 604 ಮಂದಿ ಕೋವಿಶೀಲ್ಡ್ ಹಾಗೂಇಬ್ಬರು ಸಿನೋಫಾರ್ಮ್ ಲಸಿಕೆಯನ್ನ ಪಡೆದಿದ್ದರು.
10. ಅಧ್ಯಯನಕ್ಕೆ ಒಳಪಟ್ಟವರಲ್ಲಿ ಮೂವರು ಸಾವನ್ನಪ್ಪಿದ್ದರು ಹಾಗೂ 67 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು.