ಅವಳಿ ಜವಳಿ ಮಕ್ಕಳು ಅಂದರೆ ನೋಡೋಕೆ ಒಂದೇ ತರ ಕಾಣ್ತಾರೆ ಅನ್ನೋದು ಹೊಸ ವಿಷಯವೇನಲ್ಲ. ಆದರೆ ಇಲ್ಲೊಂದು ತದ್ರೂಪಿ ಅವಳಿ ಸಹೋದರಿಯರು ತದ್ರೂಪಿ ಅವಳಿ ಸಹೋದರರ ಜೊತೆ ಪ್ರೇಮ ಸಂಬಂಧ ಹೊಂದಿದ್ದಾರೆ. ಈ ತದ್ರೂಪಿ ಜೋಡಿ ಇದೀಗ ಲಿವಿಂಗ್ ಟುಗೆದರ್ ಜೀವನ ನಡೆಸುತ್ತಿದೆ.
25 ವರ್ಷದ ವೆನೆಸ್ಸಾ ಹಾಗೂ ಕೆರಿಸ್ಸಾ ಬಾಲ್ಯದಿಂದಲೂ ಯಾವುದೇ ಕೆಲಸ ಮಾಡೋದಾದರೂ ಸಹ ಒಟ್ಟಾಗಿಯೇ ಮಾಡುತ್ತಿದ್ದರು. ಇದೀಗ ಈ ಅಭ್ಯಾಸ ಅವರ ಲವ್ ಜೀವನಕ್ಕೂ ಅನ್ವಯವಾಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಈ ವಿಚಾರವಾಗಿ ಮಾತನಾಡಿದ ವೆನೆಸ್ಸಾ, ನಾನು ಹಾಗೂ ನನ್ನ ಸಹೋದರಿ ಸ್ನೇಹಿತೆಯರಂತೆ ಬದುಕಿದ್ದೇವೆ. ನಮ್ಮಿಬ್ಬರ ನಡುವೆ ಬಾಂಧವ್ಯ ಅಷ್ಟು ಬಲಿಷ್ಠವಾಗಿದೆ. ಆದರೆ ನಾವು ಅವಳಿ ಸಹೋದರರನ್ನೇ ಪ್ರೀತಿ ಮಾಡುತ್ತೇವೆ ಎಂದು ಕನಸಲ್ಲೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.
ಈ ಅವಳಿ ಸಹೋದರಿಯರು ಕಳೆದ ವರ್ಷ ಜೂನ್ ತಿಂಗಳಲ್ಲಿ ಅಮೆರಿಕದ ಮೆಡ್ಫೋರ್ಡ್ ಎಂಬಲ್ಲಿ 29 ವರ್ಷದ ಜ್ಯಾಕೋಬ್ ಹಾಗೂ ಲುಕಾಸ್ರನ್ನ ಮೊದಲ ಬಾರಿಗೆ ಭೇಟಿ ಆಗಿದ್ದರು. ಪರ್ಸನಲ್ ಟ್ರೇನರ್ ಆಗಿರುವ ವೆನೆಸ್ಸಾಗೆ ಈ ಅವಳಿ ಸಹೋದರರ ಬಗ್ಗೆ ನರ್ಸ್ ಒಬ್ಬರು ಮಾಹಿತಿ ನೀಡಿದ್ದರು. ನರ್ಸ್ ಈ ಅವಳಿ ಜೋಡಿ ನಿಜಕ್ಕೂ ಪರ್ಫೆಕ್ಟ್ ಆಗಿರಲಿದೆ ಎಂದು ಊಹಿಸಿದ್ದರಂತೆ.
ವೆನೆಸ್ಸಾ ಲುಕಾಸ್ಗೆ ತಮ್ಮ ಮೊಬೈಲ್ ನಂಬರ್ ನೀಡಲು ನರ್ಸ್ಗೆ ಒಪ್ಪಿಗೆ ನೀಡಿದ್ದರು. ಇದಾದ ಬಳಿಕ ನರ್ಸ್ ವೆನೆಸ್ಸಾ ಬಳಿ ಲುಕಾಸ್ ಕೂಡ ಅವಳಿ ಸಹೋದರನನ್ನ ಹೊಂದಿದ್ದಾನೆ ಎಂದು ಹೇಳಿದ್ದಾರೆ. ಅಲ್ಲದೇ ಆ ಅವಳಿ ಸಹೋದರ ಕೆರಿಸ್ಸಾಗೆ ಒಳ್ಳೆಯ ಜೋಡಿ ಆಗಬಹುದು ಎಂದೂ ಹೇಳಿದ್ದರಂತೆ.
ಇದಾದ ಬಳಿಕ ಇವರು ಮೊದಲ ಬಾರಿಗೆ ಡೇಟ್ ಮಾಡಿದ್ದಾರೆ. ಹಾಗೂ ಮೊದಲ ಭೇಟಿಯಲ್ಲೇ ಪ್ರೀತಿ ಎಂಬಂತೆ ಈ ಅವಳಿ ಜೋಡಿಗಳು ಪ್ರೇಮ ನಿವೇದನೆ ಮಾಡಿಕೊಂಡಿವೆ.