ಬೆಂಗಳೂರು: ಶಿಕ್ಷಕಿಯರು ಕಡ್ಡಾಯವಾಗಿ ಸೀರೆ ಧರಿಸಿ ಶಾಲೆಗಳಿಗೆ ಹಾಜರಾಗುವಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಚಿಕ್ಕಮಗಳೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. ಈ ವಿಚಾರ ಶಿಕ್ಷಕರ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಕೆಲವು ಶಿಕ್ಷಕಿಯರು ಶಾಲೆಗಳಿಗೆ ಚೂಡಿದಾರ್ ಧರಿಸಿ ಬರುತ್ತಿದ್ದು, ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವುದರಿಂದ ಶಿಕ್ಷಕಿಯರು ಕಡ್ಡಾಯವಾಗಿ ಸೀರೆ ಧರಿಸಿ ಶಾಲೆಗಳಿಗೆ ಹಾಜರಾಗುವಂತೆ ಕ್ರಮಕೈಗೊಳ್ಳಲು ಮನವಿ ಮಾಡಲಾಗಿದೆ. ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸರ್ಕಾರದ ಮಟ್ಟದಲ್ಲಿ ಇಂತಹ ನಿಯಮವಿಲ್ಲ ಎಂದು ಮನವಿಯನ್ನು ತಿರಸ್ಕರಿಸಿದ್ದಾರೆ.
ಸಭ್ಯ ಉಡುಕು ಧರಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಲು ಸರ್ಕಾದಿಂದಲೇ ತಿಳಿಸಲಾಗಿದೆ. ಚಿಕ್ಕಮಗಳೂರು ಶಿಕ್ಷಕರ ಸಂಘ ಚೂಡಿದಾರ್ ಗೆ ವಿರೋಧಿಸಿ ಸೀರಿ ಧರಿಸಿಕೊಂಡು ಶಾಲೆಗೆ ಬರಬೇಕೆಂದು ಹೇಳಿರುವುದಕ್ಕೆ ಶಿಕ್ಷಕಿಯರ ವಲಯದಲ್ಲಿ ವಿರೋಧವಾಗಿದೆ.
ಶಿಕ್ಷಕಿಯರಿಗೆ ತಮ್ಮ ಜವಾಬ್ದಾರಿಯ ಅರಿವು ಇದೆ. ಸಭ್ಯತೆಯ ಎಲ್ಲೆಯನ್ನು ಮೀರುವುದಿಲ್ಲ. ಚೂಡಿದಾರ್ ನಂತಹ ಸಭ್ಯ ಉಡುಪಿನ ಬಗ್ಗೆ ತಕರಾರು ತೆಗೆದಿರುವುದು ಸರಿಯಲ್ಲ, ಇದು ಪುರುಷಪ್ರಧಾನ ವ್ಯವಸ್ಥೆಯ ಮನಸ್ಥಿತಿಯನ್ನು ತೋರಿಸುವಂತಿದೆ ಎಂದು ಹೇಳಲಾಗಿದೆ.