ವಿವಿಧ ರಾಜ್ಯಗಳ ಜೊತೆ ಮಾತುಕತೆ ನಡೆಸಿರುವ ಕೇಂದ್ರ ಸರ್ಕಾರ ಆರ್ ಫ್ಯಾಕ್ಟರ್ ಹೆಚ್ಚುತ್ತಿರೋದ್ರ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎನ್ನಲಾಗಿದೆ. ದೇಶದಲ್ಲಿ ಆರ್ ಫ್ಯಾಕ್ಟರ್ ಹೆಚ್ಚುತ್ತಿರೋದ್ರ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಕೇಂದ್ರ ಸರ್ಕಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಆರ್ ಫ್ಯಾಕ್ಟರ್ ಅನ್ನೋದು ಕೊರೊನಾ ಸೋಂಕು ಒಬ್ಬರಿಂದ ಎಷ್ಟು ಮಂದಿಗೆ ಹರಡುತ್ತದೆ ಎಂಬುದನ್ನ ಸೂಚಿಸುವ ದರವಾಗಿದೆ. ಆರ್ ಫ್ಯಾಕ್ಟರ್ ಮೌಲ್ಯವು 1ಕ್ಕಿಂತ ಹೆಚ್ಚಿದ್ದರೆ. ಇದರ ಅರ್ಥ ಓರ್ವ ಸೋಂಕಿತ ಒಂದಕ್ಕಿಂತ ಹೆಚ್ಚು ಮಂದಿಗೆ ಸೋಂಕು ಹರಡುತ್ತಿದ್ದಾನೆ ಎಂಬುದನ್ನ ಸಾಬೀತು ಪಡಿಸುತ್ತದೆ.
ಕೇಂದ್ರ ಗೃಹ ಕಾರ್ಯದರ್ಶಿ ಬುಧವಾರ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು ಇದರಲ್ಲಿ ಕೆಲವು ರಾಜ್ಯಗಳಲ್ಲಿ ಆರ್ ಫ್ಯಾಕ್ಟರ್ ಏರಿಕೆ ಕಾಣ್ತಿರೋದು ನಿಜಕ್ಕೂ ಆತಂಕಕಾರಿ ವಿಚಾರವಾಗಿದೆ ಹಾಗೂ ಈ ಬಗ್ಗೆ ಗಮನ ಹರಿಸಲೇಬೇಕಿದೆ ಎಂದಿದ್ದಾರೆ.
ಆರ್ ಫ್ಯಾಕ್ಟರ್ ಮೌಲ್ಯ 1.0ಕ್ಕಿಂತ ಹೆಚ್ಚಾಗಿದೆ ಎಂದರೆ ಅದರ ಅರ್ಥ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿದೆ ಎಂದಾಗಿದೆ ಎಂಬುದು ನಿಮಗೆಲ್ಲ ತಿಳಿದಿದೆ ಎಂದು ಭಾವಿಸಿದ್ದೇವೆ. ಆದ್ದರಿಂದ ಜನದಟ್ಟಣೆಯಾಗುವಂತಹ ಪ್ರದೇಶಗಳನ್ನ ನಿಯಂತ್ರಸೋದು ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿಯಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ .
ವರದಿಗಳ ಪ್ರಕಾರ ಕೇರಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಆರ್ ಫ್ಯಾಕ್ಟರ್ನಲ್ಲಿ ಏರಿಕೆ ಕಂಡು ಬಂದಿದೆ. ಇದೇ ಕಾರಣದಿಂದಾಗಿ ಈ ರಾಜ್ಯಗಳಲ್ಲಿ ಸೋಂಕಿನ ಸಂಖ್ಯೆಯು ಇಳಿಮುಖವಾಗುತ್ತಿಲ್ಲ.
ಲಾಕ್ಡೌನ್ ಹಾಗೂ ಲಾಕ್ಡೌನ್ ರೀತಿಯ ನಿರ್ಬಂಧಗಳು ಮಾತ್ರ ಆರ್ ಫ್ಯಾಕ್ಟರ್ಗಳನ್ನ ಇಳಿಮುಖ ಮಾಡಬಲ್ಲದು. ಜನರು ಮನೆಯಿಂದ ಹೊರಗೇ ಹೋಗಿಲ್ಲ ಎಂದಾದಲ್ಲಿ ಸೋಂಕಿತ ವ್ಯಕ್ತಿಯು ಹೆಚ್ಚಿನ ಜನರಿಗೆ ವೈರಸ್ನ್ನು ಹರಡಲಾರ. ಮೇ ತಿಂಗಳಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಲಾಕ್ಡೌನ್ ಇದ್ದ ಕಾರಣ ಆರ್ ಫ್ಯಾಕ್ಟರ್ ಇಳಿಮುಖವಾಗಿತ್ತು. ಆರ್ ಫ್ಯಾಕ್ಟರ್ ಇಳಿಮುಖವಾದ ಬಳಿಕ ಕೊರೊನಾ 2ನೇ ಅಲೆಯು ನಿಯಂತ್ರಣಕ್ಕೆ ಬಂದಿತ್ತು.
ಪ್ರಸ್ತುತ ಕೇರಳದಲ್ಲಿ ಆರ್ ದರ 1.10, ಮಣಿಪುರದಲ್ಲಿ 1.07, ಮೇಘಾಲಯ 0.92, ತ್ರಿಪುರ 1.15, ಮಿಜೋರಾಂ 0.86, ಅರುಣಾಚಲ ಪ್ರದೇಶ 1.14, ಸಿಕ್ಕಿಂ 0.88 ಹಾಗೂ ಆಸ್ಸಾಂನಲ್ಲಿ ಆರ್ ದರ 0.86 ಇದೆ.