ವಿಶ್ವದಾದ್ಯಂತ ಕೊರೊನಾ ಸೋಂಕು ಲಕ್ಷಾಂತರ ಮಂದಿ ಸಾವಿಗೆ ಕಾರಣವಾಗಿದೆ. ಇದ್ರ ಮಧ್ಯೆ ಮದ್ಯಪಾನದ ಬಗ್ಗೆ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಕಳೆದ ವರ್ಷ ವಿಶ್ವಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣವಾಗಿದೆ ಎಂಬ ಆಘಾತಕಾರಿ ವಿಷ್ಯ ಹೊರಬಿದ್ದಿದೆ.
ಆಲ್ಕೊಹಾಲ್ ಸೇವನೆಯಿಂದ ಸ್ತನ, ಪಿತ್ತಜನಕಾಂಗ, ಗುದನಾಳ, ಒರೊಫಾರ್ನೆಕ್ಸ್, ಧ್ವನಿಪೆಟ್ಟಿಗೆ ಮತ್ತು ಅನ್ನನಾಳ ಸೇರಿದಂತೆ ವಿವಿಧ ಕ್ಯಾನ್ಸರ್ ಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಬಲವಾದ ಪುರಾವೆಗಳಿವೆ.
ಕಡಿಮೆ ಪ್ರಮಾಣದ ಮದ್ಯಪಾನವೂ ಅಪಾಯವನ್ನು ಹೆಚ್ಚಿಸುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ. ಮದ್ಯಪಾನದಿಂದ ಇಷ್ಟೆಲ್ಲ ಅನಾಹುತವಾಗ್ತಿದ್ದರೂ ಸಾರ್ವಜನಿಕರಲ್ಲಿ ಜಾಗೃತಿ ಕಡಿಮೆಯಾಗಿದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.
2018 ರ ಯುಕೆ ಸಮೀಕ್ಷೆಯ ಪ್ರಕಾರ, 10 ಜನರಲ್ಲಿ ಒಬ್ಬರಿಗೆ ಮಾತ್ರ ಆಲ್ಕೊಹಾಲ್ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂಬುದು ತಿಳಿದಿತ್ತಂತೆ. 2020 ರಲ್ಲಿ ಜಾಗತಿಕವಾಗಿ 741,300 ಕ್ಯಾನ್ಸರ್ ಪ್ರಕರಣಗಳು ಆಲ್ಕೋಹಾಲ್ ನಿಂದ ಉಂಟಾಗಿವೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಆಲ್ಕೋಹಾಲ್ ಮೇಲೆ ಕ್ಯಾನ್ಸರ್ ಎಚ್ಚರಿಕೆಯ ಲೇಬಲ್ ಇರಬೇಕು. ತೆರಿಗೆ ಹೆಚ್ಚಾದಲ್ಲಿ ಮಾರಾಟ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಸಲಹೆ ನೀಡಿದ್ದಾರೆ.
ಪುರುಷರು ಶೇಕಡಾ 77ರಷ್ಟು ಅಂದ್ರೆ 568,700 ರಷ್ಟು ಮಂದಿ ಮದ್ಯಪಾನದಿಂದ ಕ್ಯಾನ್ಸರ್ ಗೆ ಒಳಗಾದ್ರೆ ಮಹಿಳೆಯರು ಶೇಕಡಾ 23ರಷ್ಟು ಅಂದ್ರೆ 172,600 ಮಂದಿ ಮದ್ಯಪಾನ ಕ್ಯಾನ್ಸರ್ ಗೆ ಒಳಗಾಗ್ತಿದ್ದಾರೆಂದು ಸಂಶೋಧನೆಯಲ್ಲಿ ಹೇಳಲಾಗಿದೆ.
ಯುರೋಪ್ ರಾಷ್ಟ್ರಗಳಲ್ಲಿ ಮದ್ಯದ ಮೇಲೆ ಹೆಚ್ಚು ತೆರಿಗೆ ವಿಧಿಸಿರುವ ಕಾರಣ ಅಲ್ಲಿ ಮದ್ಯಪಾನ ಒಂದಷ್ಟು ಕಡಿಮೆಯಾಗಿದೆ ಎಂದು ಅಧ್ಯಯನ ಹೇಳಿದ್ದು, ಭಾರತ ಮತ್ತು ಚೀನಾದಲ್ಲಿ ಕೊರೊನಾ ನಂತರ ಮದ್ಯಪಾನದಲ್ಲಿ ಮತ್ತಷ್ಟು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.
ಕಡಿಮೆ, ಮಧ್ಯಮ ಹಾಗೂ ಅತಿಯಾಗಿ ಮದ್ಯಪಾನ ಮಾಡುವವರಲ್ಲಿ ಅದಕ್ಕೆ ಅನುಗುಣವಾಗಿ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಆದರೆ ಒಟ್ಟಾರೆ ಮದ್ಯಪಾನ ಕ್ಯಾನ್ಸರ್ ಗೆ ಕಾರಣವಾಗುತ್ತಿರುವುದು ಸತ್ಯ ಎಂಬುದು ಅಧ್ಯಯನದಲ್ಲಿ ಕಂಡು ಬಂದಿದೆ.