ಮೈಸೂರು: ಕೆ.ಆರ್.ಎಸ್.ಡ್ಯಾಂ ಗೆ ಸಂಸದೆ ಸುಮಲತಾ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್, ಸರ್ಕಾರ ಹಾಗೂ ಅಧಿಕಾರಿಗಳು ಸ್ಪಷ್ಟ ಪಡಿಸಿದರೂ ಪದೇ ಪದೇ ಡ್ಯಾಂ ನಲ್ಲಿ ಬಿರುಕು ಬಿಟ್ಟಿದೆ ಎನ್ನುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನನಗೆ ಯಾವ ವ್ಯಕ್ತಿ ಮುಖ್ಯವಲ್ಲ, ಕೆ.ಆರ್.ಎಸ್. ಡ್ಯಾಂ ಮುಖ್ಯ. ಸಂಸದರು ಪದೇ ಪದೇ ಇಂತಹ ಹೇಳಿಕೆ ನೀಡುವುದು ಸೂಕ್ತವಲ್ಲ. ಕೆ.ಆರ್.ಎಸ್. ಡ್ಯಾಂ ಸುರಕ್ಷಿತವಾಗಿದೆ. ಯಾವುದೇ ರೀತಿ ಬಿರುಕು ಇಲ್ಲ ಎಂದು ಗಣಿ ಸಚಿವ ಮುರುಗೇಶ್ ನಿರಾಣಿ, ಕಾವೇರಿ ನಿರಾವರಿ ನಿಗಮದ ಅಧಿಕಾರಿಗಳು ಹಾಗೂ ಸ್ವತ: ಸಿಎಂ ಕೂಡ ಸ್ಪಷ್ಟ ಪಡಿಸಿದ್ದಾರೆ. ನಾವೆಲ್ಲರೂ ಡ್ಯಾಂ ನಲ್ಲಿ ಬಿರುಕಿಲ್ಲ ಎಂಬುದನ್ನು ದೃಢಪಡಿಸಿದರೂ ಮತ್ತೆ ಮತ್ತೆ ಆತಂಕ ಸೃಷ್ಟಿಸುವ ರೀತಿ ಹೇಳಿಕೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ವಿಚಾರವಾಗಿ ಜಿಲ್ಲಾಧಿಕಾರಿಗೆ ವರದಿ ನೀಡಲು ಸೂಚಿಸಲಾಗಿದ್ದು, ಪರಿಶೀಲನೆ ನಡೆಸುವುದಾಗಿ ತಿಳಿಸಿದರು.