27 ವರ್ಷದ ಮಹಿಳೆಯ ಮೇಲೆ ತಂದೆ ಹಾಗೂ ಮಗ ಸೇರಿದಂತೆ ಮೂವರು ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಆಕೆಯನ್ನ 60 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಘಟನೆ ಮಧ್ಯ ಪ್ರದೇಶದ ಭೋಪಾಲ್ನಲ್ಲಿ ನಡೆದಿದೆ. ನನ್ನನ್ನು ಮಾರಾಟ ಮಾಡಲಾಗಿದೆ ಹಾಗೂ ಒತ್ತಾಯಪೂರ್ವಕವಾಗಿ ಮದುವೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ತಿಳಿದ ಬಳಿಕ ಮಹಿಳೆ ಮದುವೆ ಮಂಟಪದಿಂದ ಪರಾರಿಯಾಗಿದ್ದಾಳೆ.
ಈ ಅಮಾನವೀಯ ಘಟನೆಯು ಭೋಪಾಲ್ನ ರತಿಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ. ಮೂವರ ವಿರುದ್ಧ ಪೊಲೀಸರು ಅತ್ಯಾಚಾರ ಹಾಗೂ ವಂಚನೆ ಕೇಸ್ ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ಆಗ್ರಾ ನಿವಾಸಿಯಾದ ಮಹಿಳೆಯು ಭೋಪಾಲ್ನ ಬಜಾರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯೊಂದಿಗೆ 7 ವರ್ಷಗಳ ಹಿಂದೆ ಮದುವೆಯಾಗಿದ್ದಳು. ಇದು ಪ್ರೇಮ ವಿವಾಹವಾಗಿದ್ದರಿಂದ ಪತಿಯ ಮನೆಯವರು ದಂಪತಿಯನ್ನ ಮನೆಯಿಂದ ಹೊರ ಹಾಕಿದ್ದರು. ಹೀಗಾಗಿ ಈ ದಂಪತಿ ಇದೇ ಏರಿಯಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಈ ದಂಪತಿಗೆ ಆರು ವರ್ಷದ ಪುತ್ರ ಕೂಡ ಇದ್ದಾನೆ.
ಮೂಲಗಳ ಪ್ರಕಾರ ಈಕೆಯ ಪತಿಯನ್ನ ಕಳೆದ ತಿಂಗಳು ಅತ್ಯಾಚಾರ ಆರೋಪದ ಅಡಿಯಲ್ಲಿ ಜೈಲಿಗಟ್ಟಲಾಗಿದೆ. ಇದಾದ ಬಳಿಕ ಪತಿಯ ಮನೆಯವರು ಮಗನನ್ನ ತಮ್ಮ ಬಳಿ ಇಟ್ಟುಕೊಂಡು ಈಕೆಯನ್ನ ಈ ಸ್ಥಳ ಬಿಟ್ಟು ಹೋಗುವಂತೆ ಒತ್ತಡ ಹೇರಿದ್ದರು. ಮಹಿಳೆ ಚೋಲ್ಡಾ ಮಂದಿರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು.
ಈ ಸಂದರ್ಭದಲ್ಲಿ ಮಹಿಳೆಯು ರವಿ ಎಂಬಾತನನ್ನ ಪರಿಚಯ ಮಾಡಿಕೊಂಡಿದ್ದಳು. ಈತ ಆಕೆಗೆ ಸಹಾಯ ಮಾಡೋದಾಗಿ ಹೇಳಿದ್ದ. ಅಲ್ಲದೇ ಈಕೆಯ ಮನೆ ಖರ್ಚನ್ನ ತಾನೇ ನೋಡಿಕೊಳ್ಳೋದಾಗಿಯೂ ಹೇಳಿದ್ದ. ಆದರೆ ಮಹಿಳೆ ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ ರವಿ ಆಕೆಯನ್ನ ಅನೇಕ ಬಾರಿ ಅತ್ಯಾಚಾರಗೈದಿದ್ದ. ಮಾತ್ರವಲ್ಲದೇ ಆತನ ತಂದೆ ಕೂಡ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದ. ಅಲ್ಲದೇ ಈ ವಿಚಾರವನ್ನ ಯಾರಿಗೂ ಹೇಳದಂತೆ ಮಹಿಳೆಗೆ ಬೆದರಿಕೆ ಕೂಡ ಹಾಕಲಾಗಿತ್ತು. ಇದಾದ ಬಳಿಕ ತಂದೆ – ಮಗ ಈಕೆಯನ್ನ ವಿದಿಶಾ ಜಿಲ್ಲೆಯ ವ್ಯಕ್ತಿಯೊಬ್ಬನಿಗೆ 60 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು. ಹಾಗೂ ಆತನ ಜೊತೆ ವಿವಾಹ ಮಾಡಿಕೊಳ್ಳಬೇಕು ಎಂದು ಮಹಿಳೆಗೆ ತಂದೆ – ಮಗ ಒತ್ತಡ ಹೇರಿದ್ದರು ಎನ್ನಲಾಗಿದೆ.