ಜಾಗದ ಸಮಸ್ಯೆ ವಿಪರೀತವಾಗಿರುವ ಮುಂಬೈನ ಆರ್ಥರ್ ರೋಡ್ ಜೈಲಿನ ಮೇಲಿರುವ ಒತ್ತಡ ನಿವಾರಿಸಲೆಂದು 5000 ಖೈದಿಗಳನ್ನು ಹಿಡಿಸಬಲ್ಲ ಬಹುಅಂತಸ್ತಿನ ಹೊಸ ಕಾರಾಗೃಹವೊಂದನ್ನು ನಿರ್ಮಾಣ ಮಾಡಲು ಮಹಾರಾಷ್ಟ್ರ ಕಾರಾಗೃಹ ಇಲಾಖೆ ನಿರ್ಧರಿಸಿದೆ.
ಅಮೆರಿಕದ ಫ್ಲಾರಿಡಾ ರಾಜ್ಯದ ಮಿಯಾಮಿ ಕಾರಾಗೃಹದ ಮಾದರಿಯಲ್ಲಿ ಹೊಸ ಕಾರಾಗೃಹವನ್ನು ಕಟ್ಟಲಾಗುವುದು ಎಂದು ಎಡಿಜಿಪಿ (ಕಾರಾಗೃಹ) ಸುನೀಲ್ ರಮಾನಂದ್ ತಿಳಿಸಿದ್ದು, ಮಾಯಾನಗರದಲ್ಲಿ ಇರುವ ಜಾಗದ ಕೊರತೆಯಿಂದ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
ಅಸಹಜ ವರ್ತನೆ ತೋರಿ ಎಸ್ಕೇಪ್: ಆಸ್ಪತ್ರೆ ಕಿಟಕಿಯಿಂದ ಜಿಗಿದು ವಿಚಾರಣಾಧೀನ ಕೈದಿ ಪರಾರಿ
“ಚೆಂಬೂರಿನಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಮಗೆ 15 ಎಕರೆ ಜಾಗ ನೀಡಲು ಒಪ್ಪಿಗೆ ನೀಡಿದೆ. ನಮಗೆ ಈ ಜಾಗ ಸಿಕ್ಕಲ್ಲಿ, ಬಹು ಅಂತಸ್ತಿನ ಕಾರಾಗೃಹ ನಿರ್ಮಾಣ ಮಾಡಬಲ್ಲೆವು. ಆರ್ಥರ್ ರೋಡ್ ಜೈಲಿನಲ್ಲಿ ವಿಪರೀತ ಖೈದಿಗಳಿರುವ ಕಾರಣ ಅಲ್ಲಿ ವಿಸ್ತರಣಾ ಕೆಲಸ ಅಸಾಧ್ಯ” ಎಂದು ಸುನೀಲ್ ತಿಳಿಸಿದ್ದಾರೆ.
“ರಾಜ್ಯದಲ್ಲಿ ಹೊಸ ಜೈಲುಗಳ ನಿರ್ಮಾಣದ ತುರ್ತು ಅಗತ್ಯವಿದೆ. ಕಳೆದ 10 ವರ್ಷಗಳಲ್ಲಿ ನಗರದಲ್ಲಿರುವ ಖೈದಿಗಳ ಸಂಖ್ಯೆಯು 24,000 ದಿಂದ 36,000ಕ್ಕೆ ಏರಿದೆ. ಇದೇ ವೇಳೆ, 13,000 ಖೈದಿಗಳು ಕೋವಿಡ್-19 ಕಾರಣದಿಂದ ತಾತ್ಕಾಲಿಕ ಬೇಲ್ ಮೇಲೆ ಹೊರಗಿದ್ದಾರೆ. ಹೀಗಾಗಿ ಕಾರಾಗೃಹಗಳಲ್ಲಿ ಸದ್ಯದ ಮಟ್ಟಿಗೆ 33,000 ಖೈದಿಗಳಿದ್ದಾರೆ. ಪುಣೆ, ಹಿಂಗೋಲಿ, ಪಾಲ್ಘರ್ ಮತ್ತು ಗೋಂಡಿಯಾದಲ್ಲಿ ಕಾರಾಗೃಹಗಳ ನಿರ್ಮಾಣ ಮಾಡುವ ಯೋಜನೆಗಳು ಇವೆ” ಎಂದು ಸುನೀಲ್ ಹೇಳಿದ್ದಾರೆ.