ಮಹಿಳೆಯರು ಪುರುಷರಿಗಿಂತ ಹೆಚ್ಚು ವರ್ಷ ಬದುಕುತ್ತಾರಾ? ಈ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಇದ್ರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಆದ್ರೆ ಸರಿಯಾದ ಮಾಹಿತಿಯಿಲ್ಲದ ಕಾರಣ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈಗ ಯುಎಸ್ ವಿಜ್ಞಾನಿಗಳು ಉತ್ತರ ಹುಡುಕಿದ್ದಾರೆ.
ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯದ ಜನಸಂಖ್ಯಾ ವಿಭಾಗದ ಸಹಾಯಕ ಪ್ರಾಧ್ಯಾಪಕ ವರ್ಜೀನಿಯಾ ಜರುಲ್ಲಿ, ವಿಶ್ವದಾದ್ಯಂತ ಮಹಿಳೆಯರ ಸರಾಸರಿ ವಯಸ್ಸು ಪುರುಷರಿಗಿಂತ ಹೆಚ್ಚಾಗಿರುತ್ತದೆ ಎಂದಿದ್ದಾರೆ. ಅದರ ಹಿಂದೆ ಎರಡು ದೊಡ್ಡ ಕಾರಣಗಳಿವೆ ಎಂದು ಅವರು ಹೇಳಿದ್ದಾರೆ.
ಲೈಂಗಿಕ ಹಾರ್ಮೋನುಗಳಲ್ಲಿನ ವ್ಯತ್ಯಾಸವು ಮೊದಲ ಕಾರಣವಾಗಿದೆ. ಮಹಿಳೆಯಲ್ಲಿ ಹೆಚ್ಚು ಈಸ್ಟ್ರೊಜೆನ್ ಮತ್ತು ಕಡಿಮೆ ಟೆಸ್ಟೋಸ್ಟೆರಾನ್ ಉತ್ಪಾದನೆಯಾಗುತ್ತದೆ. ಈಸ್ಟ್ರೊಜೆನ್ ಕಾರಣದಿಂದಾಗಿ ಮಹಿಳೆಯರಿಗೆ ಅನೇಕ ರೋಗಗಳಿಂದ ರಕ್ಷಣೆ ಸಿಗುತ್ತದೆ. ಇದರಲ್ಲಿ ಹೃದಯ ಸಂಬಂಧಿ ಖಾಯಿಲೆಯೂ ಸೇರಿದೆ. ಟೆಸ್ಟೋಸ್ಟೆರಾನ್ ಪ್ರಮಾಣ ಹೆಚ್ಚಾದಾಗ, ಕೆಲವು ಕಾಯಿಲೆಗಳು ಬರುವ ಅಪಾಯ ಹೆಚ್ಚಾಗುತ್ತದೆ. ಮಹಿಳೆಯರ ಎಕ್ಸ್ ವರ್ಣತಂತುಗಳು ಕೆಟ್ಟ ರೂಪಾಂತರಗಳಿಂದ ರಕ್ಷಿಸುತ್ತದೆ.
ಪಾಪ್ಯುಲೇಷನ್ ಅಂಡ್ ಡೆವಲಪ್ಮೆಂಟ್ ರಿವ್ಯೂ ಜರ್ನಲ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮಹಿಳೆಯರು ಪ್ರಕೃತಿಯಿಂದ ಒಂದು ರೀತಿಯ ಜೈವಿಕ ಉಡುಗೊರೆಯನ್ನು ಪಡೆದಿದ್ದಾರೆ. ಇದು ಪುರುಷರಿಗಿಂತ ಹೆಚ್ಚು ಬದುಕಲು ಅನುವು ಮಾಡಿಕೊಡುತ್ತದೆ. 1890 ರಿಂದ 1995 ರವರೆಗೆ 11,000 ಬವೇರಿಯನ್ ಕ್ಯಾಥೊಲಿಕ್ ಸನ್ಯಾಸಿಗಳು ಮತ್ತು ಸನ್ಯಾಸಿನಿಯರ ವಯಸ್ಸನ್ನು ವಿಶ್ಲೇಷಿಸಿದಾಗ, ಮಹಿಳೆಯರು ಹೆಚ್ಚು ವರ್ಷ ಬದುಕುತ್ತಾರೆಂಬುದು ತಿಳಿದಿದೆ. ಅಲ್ಲಿ ಬಹಳ ಕಟ್ಟುನಿಟ್ಟಾದ ಧಾರ್ಮಿಕ ನಿಯಮಗಳಿವೆ. ಅಲ್ಲಿ ಪುರುಷರು ಮತ್ತು ಮಹಿಳೆಯರು ಒಂದೇ ರೀತಿಯ ಜೀವನ ನಡೆಸುತ್ತಾರೆ. ಆದ್ರೂ ಮಹಿಳೆಯರು ಪುರುಷರಿಗಿಂತ 2 ವರ್ಷ ಹೆಚ್ಚು ಬದುಕಿದ್ದು, ಇದಕ್ಕೆ ಜೈವಿಕ ಕಾರಣವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
2018ರ ವರದಿಯೊಂದು ವೀಪತ್ತು, ಬರ, ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನಿಸಿದ ಹುಡುಗಿಯರು ಹುಡುಗರಿಗಿಂತ ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿರುತ್ತಾರೆ. ಆ ಸಮಯದಲ್ಲಿ ಜನಿಸಿದ ಹುಡುಗರಿಗಿಂತ ನಾಲ್ಕೈದು ವರ್ಷ ಹುಡುಗಿಯರು ಹೆಚ್ಚು ಬದುಕುತ್ತಾರೆಂದು ಅಧ್ಯಯನದಲ್ಲಿ ಹೇಳಲಾಗಿದೆ.
ಇದಕ್ಕೆ ಇನ್ನೊಂದು ಕಾರಣ ಆರೋಗ್ಯದ ಬಗ್ಗೆ ಕಾಳಜಿ. ಮಹಿಳೆಯರು ಹೆಚ್ಚು ಪೌಷ್ಠಿಕಾಂಶದ ಆಹಾರ ಸೇವನೆ ಮಾಡಿದ್ರೆ ಪುರುಷರು ಕೊಬ್ಬಿನ ಆಹಾರ ಸೇವನೆ ಮಾಡ್ತಾರೆ. ಶೇಕಡಾ 33ರಷ್ಟು ಮಹಿಳೆಯರು ಆಸ್ಪತ್ರೆಗೆ ಹೋದ್ರೆ ಆಸ್ಪತ್ರೆಗೆ ಹೋಗುವ ಪುರುಷರ ಸಂಖ್ಯೆ ಕಡಿಮೆ ಎನ್ನಲಾಗಿದೆ. ಹಾಗೆ ಪುರುಷರ ಧೂಮಪಾನ ಹಾಗೂ ಮದ್ಯಪಾನ ಕೂಡ ಇದಕ್ಕೆ ಕಾರಣವಾಗಿದೆ.