ಕೊರೊನಾ 2ನೇ ಅಲೆ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿದೆ. ಈ ಅಲೆಯಲ್ಲಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದ್ದು, ಇದರ ಜೊತೆಗೆ ಬ್ಲಾಕ್, ವೈಟ್ ಮೊದಲಾದ ವೈರಸ್ ಗಳು ಮತ್ತಷ್ಟು ಜೀವಹಾನಿಗೆ ಕಾರಣವಾಗಿದ್ದವು. ಇದೀಗ ಕೊರೊನಾ ಅಬ್ಬರ ತಗ್ಗಿದ ಪರಿಣಾಮ ಬಹುತೇಕ ರಾಜ್ಯಗಳಲ್ಲಿ ಅನ್ಲಾಕ್ ಘೋಷಿಸಲಾಗಿದೆ. ಹೀಗಾಗಿ ಸಾರ್ವಜನಿಕರು ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿರುವ ಮಧ್ಯೆ ಮತ್ತೊಂದು ಶಾಕಿಂಗ್ ಸಂಗತಿ ಹೊರಬಿದ್ದಿದೆ.
ಹೈದರಾಬಾದ್ ಮೂಲದ ತಜ್ಞ ಡಾ. ವಿಪಿನ್ ಶ್ರೀವಾತ್ಸವ್, ಜುಲೈ 4 ರಿಂದಲೇ ಕೊರೊನಾ ಮೂರನೇ ಅಲೆ ದೇಶದಲ್ಲಿ ಆರಂಭವಾಗಿದೆ ಎಂದು ಹೇಳಿದ್ದಾರೆ. ಜುಲೈ 4ರಿಂದ ಈವರೆಗೆ ಕಂಡುಬಂದಿರುವ ಸೋಂಕಿತರ ಪ್ರಮಾಣ ಹಾಗೂ ಸಾವಿನ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಅವರು, 2021ರ ಫೆಬ್ರವರಿ ಮೊದಲ ವಾರದ ಆರಂಭದಲ್ಲಿ ಎರಡನೇ ಅಲೆ ಕಾಣಿಸಿಕೊಂಡ ರೀತಿಯಲ್ಲಿಯೇ ಮೂರನೇ ಅಲೆ ಆರಂಭವಾದಂತೆ ಕಾಣುತ್ತಿದೆ ಎಂದು ತಿಳಿಸಿದ್ದಾರೆ.
15 ತಿಂಗಳ ಅವಧಿಯಲ್ಲಿನ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣವನ್ನು ಆಧರಿಸಿ ಡಾ. ವಿಪಿನ್ ಶ್ರೀವಾತ್ಸವ ಈ ಒಂದು ವರದಿಯನ್ನು ತಯಾರಿಸಿದ್ದು, ಆದರೆ ಪ್ರಸ್ತುತ ಲಸಿಕೆ ನೀಡುತ್ತಿರುವುದರಿಂದ ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಮೂರನೇ ಅಲೆಯ ಅಬ್ಬರವನ್ನು ತಗ್ಗಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.