ಕೆಆರ್ಎಸ್ ಡ್ಯಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿಚಾರ ಸಂಬಂಧ ಸ್ಥಳ ಪರಿಶೀಲನೆ ನಡೆಸಲು ಸಿದ್ದರಾಮಯ್ಯಗೆ ಸಂಸದೆ ಸುಮಲತಾ ಆಹ್ವಾನ ನೀಡಿದ್ದಾರೆ. ಇದೇ ವಿಚಾರವಾಗಿ ಬಾದಾಮಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಗಣಿಗಾರಿಕೆ ಸ್ಥಳ ನೋಡಲು ಬರೋದಾಗಿ ಹೇಳಿದ್ದೇನೆ. ಆದರೆ ಯಾವಾಗ ಎಂದು ಹೇಳಿಲ್ಲ. ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನ ಟಾಕ್ವಾರ್ಗೂ ನನಗೂ ಸಂಬಂಧ ಇಲ್ಲ. ಅಕ್ರಮ ಗಣಿಗಾರಿಕೆಯನ್ನ ನಿಲ್ಲಿಸಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ಸಂಸದೆಯಾಗಿ ಸುಮಲತಾ ಆರೋಪ ಮಾಡಿದಾಗ ರಾಜ್ಯ ಸರ್ಕಾರ ಅದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ರು.
ಆರೋಪಗಳು ಕೇಳಿ ಬಂದಾಗ ಅಕ್ರಮ ಗಣಿಗಾರಿಕೆ, ಕ್ರಷರ್ಗಳು ನಡೆಯುತ್ತಿದೆಯಾ ಎಂದು ಸರ್ಕಾರ ಪರಿಶೀಲನೆ ಮಾಡಬೇಕು. ಸಿಎಂ ಯಡಿಯೂರಪ್ಪ, ಈಶ್ವರಪ್ಪರ ಕ್ಷೇತ್ರದಲ್ಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಚಿಕ್ಕಬಳ್ಳಾಪುರದಲ್ಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಶಿವಮೊಗ್ಗ ಗ್ರಾಮೀಣ ಭಾಗದಲ್ಲಿ ಕಾರ್ಮಿಕರು ಸತ್ತೇ ಹೋದರು. ನಾನು ಈ ವಿಚಾರವಾಗಿ ಅಸೆಂಬ್ಲಿಯಲ್ಲೇ ಮಾತನಾಡಿದ್ದೆ. ಆದರೆ ಈ ಸರ್ಕಾರ ಏನು ಹೇಳಿದರೂ ಗಂಭೀರವಾಗಿ ತೆಗೆದುಕೊಳ್ಳೋದೇ ಇಲ್ಲ. ಯಡಿಯೂರಪ್ಪ ಖರ್ಚು ಉಳಿಸಿಕೊಳ್ಳೋದು, ಅವರ ಪುತ್ರ ಹಣ ಹೊಡೆಯೋದು ಎರಡೇ ಕೆಲಸ ಆಗ್ತಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಯಡಿಯೂರಪ್ಪರ ಖುರ್ಚಿ ಅಲುಗಾಡಲು ಶುರುವಾಗಿ ಬಹಳ ಸಮಯ ಆಗಿದೆ. ಅಧಿಕಾರ ಉಳಿಸಿಕೊಳ್ಳಲು ಏನು ಮಾಡಬೇಕೋ ಆ ಎಲ್ಲಾ ಪ್ರಯತ್ನಗಳನ್ನ ಯಡಿಯೂರಪ್ಪ ಮಾಡ್ತಿದ್ದಾರೆ. ಅವರ ಮಗ ಇನ್ನೊಂದು ಕಡೆ ಹಣ ಹೊಡೆಯುತ್ತಿದ್ದಾನೆ ಎಂದು ವ್ಯಂಗ್ಯ ಮಾಡಿದ್ರು.