ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಎಚ್ಡಿಕೆ ನಡುವೆ ನಡೆಯುತ್ತಿರುವ ವಾಕ್ಸಮರದ ವಿಚಾರವಾಗಿ ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಎ. ಮಂಜು, ಈ ವಿವಾದ ಬಗೆಹರಿಯೋದಕ್ಕೆ ದೇವೇಗೌಡರ ಮಧ್ಯ ಪ್ರವೇಶ ಮಾಡೋ ಅನಿವಾರ್ಯತೆ ತುಂಬಾನೇ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇವೇಗೌಡ ಹಾಗೂ ನಮ್ಮ ಸಮುದಾಯದ ಸ್ವಾಮೀಜಿಯನ್ನ ಕರೆದು ಮಾತನಾಡುವ ಮೂಲಕ ಈ ಸಮಸ್ಯೆಯನ್ನ ಬಗೆಹರಿಸೋದು ಒಳ್ಳೆಯದು ಎಂದು ನನಗನಿಸುತ್ತಿದೆ. ಡ್ಯಾಂ ಬಿರುಕು ಬಿಟ್ಟಿದೆ ಅಂದರೆ ಕಾನೂನು ಪ್ರಕಾರ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಅಧಿಕಾರ ಮಾಡಿ ಗೊತ್ತಿರುವ ರಾಜಕೀಯ ನಾಯಕರು ಪದ ಬಳಕೆ ವಿಚಾರದಲ್ಲಿ ಸ್ವಲ್ಪ ಯೋಚನೆ ಮಾಡಬೇಕು ಅನ್ನೋದು ನನ್ನ ಮನವಿಯಾಗಿದೆ.
ಒಂದು ಕ್ಷೇತ್ರದ ಸಂಸದರನ್ನ ಆ ಕ್ಷೇತ್ರದ ಜನತೆ ಮತ ಹಾಕಿ ಗೆಲ್ಲಿಸಿರ್ತಾರೆ. ಹೀಗಾಗಿ ನಾವು ಜನಪ್ರತಿನಿಧಿಗೆ ಗೌರವ ಕೊಡಲೇಬೇಕು. ಕಳೆದ ಬಾರಿ ಹೆಚ್.ಡಿ ರೇವಣ್ಣ ಬಾಯಿಗೆ ಬಂದಂತೆ ಮಾತನಾಡಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲುವಂತೆ ಮಾಡಿದ್ರು. ಇಂದು ಹೆಚ್ಡಿಕೆ ಕೂಡ ಅದೇ ರೀತಿ ಮಾತನಾಡಿ ತಮ್ಮ ಪುತ್ರನ ಭವಿಷ್ಯವನ್ನ ತಾವೇ ಹಾಳು ಮಾಡಿಕೊಳ್ತಾರೆ. ಹೀಗಾಗಿ ಇಂತದ್ದೆಲ್ಲ ನಿಲ್ಲಬೇಕು ಅಂತಾ ದೇವೇಗೌಡರು ಸಮುದಾಯದ ಹಿರಿಯರನ್ನ ಕರೆಯಿಸಿ ವಿವಾದ ಬಗೆಹರಿಸಬೇಕು ಅನ್ನೋದು ನನ್ನ ಅಭಿಯ್ರಾಯ. ಸ್ವಾಮೀಜಿಯವರನ್ನ ಕರೆಸಿ ಸುಮಲತಾ – ಕುಮಾರಸ್ವಾಮಿ ಇಬ್ಬರನ್ನೂ ಮಾತನಾಡಿಸಬೇಕು. ಈ ವಿವಾದಕ್ಕೆ ಇಂದೇ ತೆರೆ ಬೀಳುವಂತೆ ಆಗಬೇಕು ಎಂದು ಹೇಳಿದ್ರು.