ನವದೆಹಲಿ: ಜಾತಿ ದೌರ್ಜನ್ಯದ ಮತ್ತೊಂದು ಘಟನೆ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ನಡೆದಿದೆ. ಅಕ್ಬರ್ ಪುರ ಪ್ರದೇಶದ ಸಮೀಪದ ಹಳ್ಳಿಯ ಮಹಿಳೆಯೊಂದಿಗೆ ಸಂಬಂಧ ಹೊಂದಿದ ಆರೋಪದ ಮೇಲೆ 20 ವರ್ಷದ ದಲಿತ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ.
ಹಲ್ಲೆಯ ವಿಡಿಯೋ ಪೊಲೀಸರ ಗಮನಕ್ಕೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವಿಡಿಯೋದಲ್ಲಿರುವ ಹಲ್ಲೆಕೋರರನ್ನು ಗುರುತಿಸಿ ಐಪಿಸಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪೇಂಟರ್ ಆಗಿರುವ ಯುವಕ ಮಹಿಳೆಯನ್ನು ಭೇಟಿಯಾಗಿದ್ದ ವೇಳೆಯಲ್ಲಿ ಗುಂಪು ಅವರ ಮೇಲೆ ದಾಳಿ ಮಾಡಿದೆ. ಯುವಕನನ್ನು ಕರುಣೆಯಿಲ್ಲದೆ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ಮಾಡಲಾಗಿದೆ. ಅರೆಬೆತ್ತಲೆಗೊಳಿಸಿ ಕ್ರೂರವಾಗಿ ಯುವಕನ ಮೇಲೆ ಹಲ್ಲೆ ಮಾಡಲಾಗಿದ್ದು, ಘಟನೆಯ ದೃಶ್ಯಗಳ ವಿಡಿಯೋ ವೈರಲ್ ಆಗಿದೆ. ಗಾಯಗೊಂಡಿರುವ ಯುವಕನನ್ನು ಉತ್ತರ ಪ್ರದೇಶದ ಕಾನ್ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯ ಬಳಿಕ ಆತನ ಆರೋಗ್ಯ ಸ್ಥಿರವಾಗಿದೆ.