ಮುಂಬೈ: ಇಂಧನ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಎತ್ತಿನ ಬಂಡಿಯಲ್ಲಿ ಹತ್ತಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಏಕಾಏಕಿ ಬಂಡಿ ಕುಸಿದು ಬಿದ್ದ ವಿಲಕ್ಷಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಎತ್ತಿನ ಗಾಡಿ ಮೇಲೆ ಹತ್ತಿದ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದ್ರು. ‘ನಮ್ಮ ನಾಯಕ ಹೇಗಿರಬೇಕು ? ರಾಹುಲ್ ಗಾಂಧಿಯಂತೆ ಇರಬೇಕು’ ಎಂದು ಘೋಷಣೆ ಕೂಗುತ್ತಿದ್ದ ವೇಳೆಯೇ ನೂರಾರು ಕಾರ್ಯಕರ್ತರನ್ನು ಹೊತ್ತಿದ್ದ ಎತ್ತಿನ ಬಂಡಿ ಕುಸಿದಿದೆ. ಕೂಡಲೇ ಕೆಳಕ್ಕೆ ಬಿದ್ದ ಕಾರ್ಯಕರ್ತರನ್ನು ಇನ್ನುಳಿದ ಪ್ರತಿಭಟನಾನಿರತರು ರಕ್ಷಿಸಿದರು.
ಗಗನಕ್ಕೇರುತ್ತಿರುವ ಇಂಧನ ಬೆಲೆ ವಿರುದ್ಧ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪ್ರತಿಭಟಿಸುತ್ತಿವೆ. ಸಾಮಾನ್ಯ ಜನರಿಗೆ ಇಂಧನ ದರ ಏರಿಕೆ ಹೊರೆಯಾಗುತ್ತಿದೆ ಎಂದು ವಿಪಕ್ಷಗಳು ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿವೆ.
ಕೊರೊನಾ ಲಸಿಕೆ ಸ್ವೀಕರಿಸುವ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ
ಮೊನ್ನೆಯಷ್ಟೇ ಪಶ್ಚಿಮ ಬಂಗಾಳದ ಕಾರ್ಮಿಕ ಸಚಿವ ಬೆಚರಾಮ್ ಮನ್ನಾ ಅವರು 38 ಕಿ.ಮೀ. ಸೈಕಲ್ ಸವಾರಿ ಮಾಡಿದ್ದರು. ಹೂಗ್ಲಿಯ ಸಿಂಗೂರ್ ನಲ್ಲಿರುವ ತಮ್ಮ ನಿವಾಸದದಿಂದ ಕೋಲ್ಕತ್ತಾ ವಿಧಾನಸಭೆಯನ್ನು ತಲುಪಲು ಸೈಕಲ್ ನಲ್ಲೇ ತೆರಳಿದ್ದರು. ಈ ಮೂಲಕ ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆ ವಿರುದ್ಧ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದರು.
ದೇಶದಾದ್ಯಂತ ಶನಿವಾರ ಮತ್ತೆ ಇಂಧನ ದರ ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆ ಲೀಟರ್ ಗೆ 35 ಪೈಸೆ ಹಾಗೂ ಡೀಸೆಲ್ ದರ 26 ಪೈಸೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀ.ಗೆ 106.93 ರೂ. ಆಗಿದ್ದರೆ, ಡೀಸೆಲ್ ಬೆಲೆ 97.46ರಷ್ಟಿದೆ.