ವಿಶ್ವದಲ್ಲಿ ಕೊರೊನಾ ಹರಡುವಿಕೆ ಮಂದಗತಿಯಲ್ಲಿಲ್ಲ. ಕೊರೊನಾ ಲಸಿಕೆ ಹಂಚಿಕೆಯಲ್ಲಿ ವಿಳಂಬ ಒಂದೆಡೆಯಾದರೆ ಡೆಲ್ಟಾ ರೂಪಾಂತರಿ ಪ್ರಕರಣಗಳು ಏರಿಕೆ ಕಾಣುತ್ತಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್, ಆರರಲ್ಲಿ ಐದು ಪ್ರದೇಶಗಳಲ್ಲಿ ಕೋವಿಡ್ - 19 ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಆಫ್ರಿಕಾದಲ್ಲಿ ಕಳೆದ 2 ವಾರಗಳಲ್ಲಿ ಕೋವಿಡ್ ಸಾವಿನ ಪ್ರಮಾಣ 30 – 40 ಪ್ರತಿಶತ ಏರಿಕೆ ಕಂಡಿದೆ ಎಂದು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ 5 ಲಕ್ಷಕ್ಕೂ ಅಧಿಕ ಹೊಸ ಕೊರೊನಾ ಕೇಸ್ಗಳು ಹಾಗೂ 9300 ಮರಣಗಳು ವರದಿಯಾಗಿವೆ ಎಂದು ಸ್ವಾಮಿನಾಥನ್ ಹೇಳಿದ್ರು.
ಡೆಲ್ಟಾ ರೂಪಾಂತರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರೋದು, ಲಾಕ್ಡೌನ್ ನಿರ್ಬಂಧಗಳ ಸಡಿಲಿಕೆ ಹಾಗೂ ಕೊರೊನಾ ಲಸಿಕೆ ಅಭಿಯಾನ ಮಂದಗತಿಯಲ್ಲಿ ಸಾಗುತ್ತಿರೋದು ಕೊರೊನಾ ಪ್ರಕರಣ ಇನ್ನಷ್ಟು ಹೆಚ್ಚಲು ಪ್ರಮುಖ ನಾಲ್ಕು ಕಾರಣಗಳು ಎಂದು ಹೇಳಿದ್ದಾರೆ.
ಮೂಲ ವೈರಸ್ನಿಂದ ಸೋಂಕಿಗೆ ಒಳಗಾದ ವ್ಯಕ್ತಿಯು ಮೂವರಿಗೆ ಸೋಂಕನ್ನ ಹರಡುವ ಸಾಮರ್ಥ್ಯ ಹೊಂದಿರುತ್ತಾನೆ. ಆದರೆ ಡೆಲ್ಟಾ ರೂಪಾಂತರಿಯಿಂದ ಸೋಂಕಿಗೆ ಒಳಗಾದ ವ್ಯಕ್ತಿಯು ಬರೋಬ್ಬರಿ 8 ಮಂದಿಗೆ ಸೋಂಕನ್ನ ಹರಡುತ್ತಾನೆ ಎಂದು ಹೇಳಿದ್ದಾರೆ.