ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಆಸ್ತಿ ನೋಂದಣಿ ತಂತ್ರಾಂಶ ಬದಲಾವಣೆಗೆ ತೀರ್ಮಾನಿಸಲಾಗಿದೆ.
ಆಸ್ತಿ ನೋಂದಣಿಗೆ ಬಳಕೆ ಮಾಡಲಾಗುತ್ತಿರುವ ಕಾವೇರಿ ತಂತ್ರಾಂಶದಲ್ಲಿ ಸಾಮರ್ಥ್ಯ ಮೀರಿ ಆಸ್ತಿಗಳ ನೋಂದಣಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಇ -ಆಡಳಿತಕ್ಕೆ ಹೊಸ ತಂತ್ರಾಂಶ ರೂಪಿಸಲು ಸೂಚನೆ ನೀಡಲಾಗಿದ್ದು, ಇನ್ನು ಆರು ತಿಂಗಳಲ್ಲಿ ಹೊಸ ತಂತ್ರಾಂಶ ರೆಡಿಯಾಗಲಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಆಸ್ತಿಗಳ ಋಣಬಾರ ಪ್ರಮಾಣಪತ್ರ ಪಡೆಯಲು ಇನ್ನು ಮುಂದೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಕಾಯುವ ಅಗತ್ಯವಿರುವುದಿಲ್ಲ ಆನ್ಲೈನ್ ಮೂಲಕ ಒಂದೇ ದಿನದಲ್ಲಿ ಇ.ಸಿ. ಪಡೆಯುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆನ್ಲೈನ್ ಮೂಲಕ ಸರ್ಕಾರಕ್ಕೆ ಶುಲ್ಕ ಪಾವತಿಸಿ, ತಮಗೆ ಬೇಕಾದ ಇ.ಸಿ.ಯನ್ನು ಆನ್ ಲೈನ್ ಮೂಲಕ ಡೌನ್ಲೋಡ್ ಮಾಡಿ ತೆಗೆದುಕೊಳ್ಳಬಹುದು. ರಾಜ್ಯದ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಿಯೋಸ್ಕ್ ಅಳವಡಿಸಿ ಅಲ್ಲಿಯೂ ಇ.ಸಿ. ಪಡೆಉಕೊಳ್ಳುವ ವ್ಯವಸಸ್ಥೆ ಕಲ್ಪಿಸಲಾಗುವುದು.
ಇನ್ನು ಆಸ್ತಿಗಳನ್ನು ಒತ್ತೆಯಿಟ್ಟು ಗೃಹ ಸಾಲ ಸೇರಿದಂತೆ ಹಲವು ಸಾಲಗಳನ್ನು ಪಡೆಯುವ ಸಂದರ್ಭದಲ್ಲಿ ಇಂತಹ ವಸ್ತುಗಳನ್ನು ನೋಂದಣಿ ಮಾಡಿಸಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಬೇಕಿದೆ. ಇನ್ನು ಮುಂದೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗುವ ಅಗತ್ಯ ಇರುವುದಿಲ್ಲ. ಆನ್ ಲೈನ್ ಮೂಲಕ ನೋಂದಣಿ ಮಾಡಿಸುವ ವ್ಯವಸ್ಥೆಯನ್ನು ಬ್ಯಾಂಕುಗಳಿಗೆ ನೀಡಲಿದ್ದು, ನಿಗದಿತ ಶುಲ್ಕವನ್ನು ಪಾವತಿಸುವ ಮೂಲಕ ಬ್ಯಾಂಕ್ ನಲ್ಲೇ ಮಾರ್ಟಗೇಜ್ ರಿಜಿಸ್ಟ್ರೇಷನ್ ಮಾಡಬಹುದಾಗಿದೆ ಎಂದು ಹೇಳಲಾಗಿದೆ.