alex Certify ಗ್ರಾಮೀಣ ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮೀಣ ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್ ಗುಡ್ ನ್ಯೂಸ್

ಬೆಂಗಳೂರು: ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪರೀಕ್ಷೆಗೆ ನೋಂದಾಯಿಸಿದ ಎಲ್ಲ ವಿದ್ಯಾರ್ಥಿಗಳನ್ನು ಪಿ.ಯು.ಸಿ. ತರಗತಿಗಳ ಪ್ರವೇಶಕ್ಕೆ ಅವಕಾಶ ನೀಡಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಗಳ ಕುರಿತು ರಾಜ್ಯದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಶುಕ್ರವಾರ ಡಿ.ಎಸ್.ಇ.ಆರ್.ಟಿ ಯಲ್ಲಿ ‘ಬನ್ನಿ ವಿದ್ಯಾರ್ಥಿಗಳೇ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ಬರೆಯೋಣ’ ಎಂಬ ಧ್ಯೇಯದೊಂದಿಗೆ ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳೊಂದಿಗೆ ವಿಡಿಯೋಕಾನ್ಫೆರೆನ್ಸ್ ಮೂಲಕ ನಡೆದ ಮುಕ್ತ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆ/ ಸಲಹೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಎಲ್ಲರೂ ಪಾಸಾಗುವುದರಿಂದ ಪಿಯು ಪ್ರವೇಶ ಸಮಸ್ಯೆಯ ಕುರಿತು ಯಾರಿಗೂ ಯಾವುದೇ ಆತಂಕ ಬೇಡವೇ ಬೇಡ ಎಂದರು.

“ಈಗಾಗಲೇ ವಿದ್ಯಾರ್ಥಿಗಳಾದ ನೀವು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧವಾಗಿರುವುದರಿಂದ ಧೈರ್ಯದಿಂದ ಪರೀಕ್ಷೆ ಬರೆಯುವುದರತ್ತ ಗಮನ ಹರಿಸಿ ನಾವು ನಿಮ್ಮನ್ನು ಪಿಯುಸಿ ತರಗತಿಗಳಿಗೆ ಪ್ರವೇಶ ನೀಡಲು ಎಲ್ಲ ವ್ಯವಸ್ಥೆ ಮಾಡುತ್ತೇವೆ” ಎಂದರು.

ರಾಜ್ಯದ ಸರ್ಕಾರಿ ಪಿಯು ಕಾಲೇಜಗಳಲ್ಲಿ ಪಿಯು ಸೀಟುಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಖಾಸಗಿ ಶಾಲೆಗಳಿಂದ ಪಿಯು ಸೀಟುಗಳ ಹೆಚ್ಚಳದ ಕೋರಿಕೆಗಳು ಬಂದರೆ ಪರಿಗಣಿಸಿ ಎಲ್ಲ ವಿದ್ಯಾರ್ಥಿಗಳಿಗೂ ಪಿಯುಸಿ ಸೀಟು ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಶಾಲೆಗಳಿಗೆ ಕುಡಿಯುವ ನೀರು-ಶೌಚಾಲಯ ವ್ಯವಸ್ಥೆ:

ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಗಳಿಲ್ಲದ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಈ ಸೌಲಭ್ಯಗಳನ್ನು  ಕಲ್ಪಿಸಲು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪಕವಾದ ಕಾರ್ಯಕ್ರಮವನ್ನು ಹಾಕಿಕೊಂಡಿದ್ದು, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ಸಚಿವರು ಹೇಳಿದರು.

ಡಿವೈಸರ್ ಪೂರೈಕೆ- ಇಂಟರ್ನೆಟ್ ಬಲಪಡಿಸಲು ಕ್ರಮ: 

ಗ್ರಾಮೀಣ ಪ್ರದೇಶದ ಹಲವಾರು ಮಕ್ಕಳು ಈ ಪರ್ಯಾಯ ಬೋಧನೆಯ ವಿಧಾನಗಳಾದ ದೂರದರ್ಶನ ಚಂದನಾ, ಮೊಬೈಲ್, ಲ್ಯಾಪ್ ಟಾಪ್ ಸೌಲಭ್ಯದ ಮೂಲಕ ನೀಡುವ ತರಗತಿಗಳಿಗೆ ಉಪಕರಣಗಳಿಲ್ಲದೇ ವಂಚಿತವಾಗಿದ್ದಾರೆ. ಹಾಗೆಯೇ ಈ ಸೌಲಭ್ಯವಿದ್ದವರಿಗೆ ಇಂಟರ್ನೆಟ್-ಅಂತರ್ಜಾಲ ವ್ಯವಸ್ಥೆ ಬಲಯುತವಾಗಿಲ್ಲದೇ ಇರುವುದರಿಂದ ತರಗತಿಗಳನ್ನು ಸರಿಯಾಗಿ ಆಲಿಸಲಾಗುತ್ತಿಲ್ಲ ಎಂಬ ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಕುರಿತು ಇಂತಹ ಸೌಲಭ್ಯಗಳನ್ನು ಹೇಗೆ ಒದಗಿಸಬೇಕೆಂಬ ಕುರಿತು ಚಿಂತನೆ ನಡೆಸುತ್ತಿದೆ. ಹಲವಾರು ತಾಲೂಕುಗಳಲ್ಲಿ ಬಿಇಒ ಹಂತದಲ್ಲಿ ಮೊಬೈಲ್ ಬ್ಯಾಂಕ್ ಮೂಲಕ ದಾನಿಗಳಿಂದ ಮೊಬೈಲ್ ಫೋನ್ಗಳನ್ನು ಸಂಗ್ರಹಿಸಲಾಗುತ್ತಿದೆ. ರೋಟರಿ ಮತ್ತಿತರ ಸಂಸ್ಥೆಗಳಿಂದ ಇದಕ್ಕೆ ಅಗತ್ಯವಾದ ಉಪಕರಣಗಳನ್ನು ಪಡೆಯಲು ಕ್ರಮ ವಹಿಸಲಾಗಿದೆ. ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಬಲಯುತಗೊಳಿಸಲು ಅನುವಾಗುವಂತೆ ಇಂಟರ್ನೆಟ್ ಒದಗಿಸುವ ಸಂಸ್ಥೆಗಳ ಸಭೆ ಕರೆದು ಚರ್ಚಿಸುವಂತೆ ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಗ್ರಾಮ ಪಂಚಾಯ್ತಿ ಗ್ರಂಥಾಲಯಗಳಲ್ಲಿ ಟಿ.ವಿ.:

ಗ್ರಾಮ ಪಂಚಾಯ್ತಿ ಗ್ರಂಥಾಲಯಗಳಲ್ಲಿ ಟಿ.ವಿ. ವ್ಯವಸ್ಥೆ ಮಾಡಿ ಅಲ್ಲಿಗೆ ಯಾರ ಮನೆಯಲ್ಲಿ ಟಿ.ವಿ. ಸೆಟ್ ಇಲ್ಲವೋ ಅಂತಹ ಮಕ್ಕಳು ತಮ್ಮ ತರಗತಿಗೆ ನಿಗದಿಪಡಿಸಿದ ಪಠ್ಯಗಳನ್ನು ದೂರದರ್ಶನ ಚಂದನಾ ವಾಹಿನಿ ವೀಕ್ಷಿಸುವಂತಹ ವೇದಿಕೆಯನ್ನು ಕಲ್ಪಿಸುವ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಅದು ಪ್ರಗತಿಯಲ್ಲಿದೆ ಎಂದೂ ಸಚಿವರು ತಿಳಿಸಿದರು.

ಪರೀಕ್ಷೆ ಬರೆಯಲು ಉತ್ಸುಕರಾಗಿದ್ದೇವೆ:

ಅನೇಕ ರಾಜ್ಯಗಳು ಮಂಡಳಿ ಪರೀಕ್ಷೆಯನ್ನು ರದ್ದು ಮಾಡಿದ ಸಂದರ್ಭದಲ್ಲಿ ಯಾವುದೇ ರೂಪದಲ್ಲೇ ಆಗಲಿ ಪರೀಕ್ಷೆ ನಡೆಸುವ ಮೂಲಕ ನಮ್ಮ ಆತ್ಮವಿಶ್ವಾಸ  ಮೂಡಿಸಿದ್ದಲ್ಲದೇ ನಮ್ಮ ಪ್ರತಿಭೆ, ಸಾಮಥ್ರ್ಯ ಪ್ರದರ್ಶನಕ್ಕೆ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟು, ಪರೀಕ್ಷೆಯಿಲ್ಲದೇ ಉತ್ತೀರ್ಣರಾದವರೆಂದು ಜೀವನವಿಡೀ ಕಾಡುತ್ತಿದ್ದ ಮುಜುಗರ/ ತಪ್ಪಿತಸ್ಥ ಭಾವನೆಯಿಂದ ನಮ್ಮನ್ನು ಮುಕ್ತಗೊಳಿಸಿದ್ದಕ್ಕೆ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಇಂದು ಸಂವಾದದಲ್ಲಿ ಭಾಗಿಯಾದ ಮಕ್ಕಳು ಹರ್ಷ ವ್ಯಕ್ತಪಡಿಸಿದರು.

ಈಗಾಗಲೇ ಪರೀಕ್ಷಾ ಮಂಡಳಿಯಿಂದ ಕಳಿಸಿದ ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಒಎಂಆರ್ ಶೀಟ್ಗಳನ್ನು ಉತ್ತರಿಸಿದ್ದೇವೆ.  ನಮಗೆ ಪರೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮಕ್ಕಳು ಅಭಿಪ್ರಾಯಪಟ್ಟರು. ಪರೀಕ್ಷೆ ಅಂಕಗಳು, ಪರೀಕ್ಷಾ ಸಮಯ ಕುರಿತು ತಮ್ಮ ಆತಂಕ/ಗೊಂದಲಗಳನ್ನು ನಿವಾರಿಸಿಕೊಂಡ ಮಕ್ಕಳು ರಫ್ ವರ್ಕ್ಗೆ ಪ್ರಶ್ನೆ ಪತ್ರಿಕೆಯೊಂದಿಗೆ ಹೆಚ್ಚುವರಿ ಹಾಳೆಗಳನ್ನು ಒದಗಿಸುವ ಮಂಡಳಿ  ಕ್ರಮವನ್ನು ಮುಕ್ತಕಂಠದಿಂದ ಸ್ವಾಗತಿಸಿ ಹರ್ಷವ್ಯಕ್ತಪಡಿಸಿದರು. ಬಹುತೇಕ ಮಕ್ಕಳು ಪರೀಕ್ಷಾ ವೇಳೆ ನಿಗದಿ ಕುರಿತು ಸಮಾಧಾನ ವ್ಯಕ್ತಪಡಿಸಿದರು. ಪರೀಕ್ಷೆ ಕುರಿತು ಕೈಗೊಂಡ ವಿವಿಧ ಕ್ರಮಗಳು, ಪರೀಕ್ಷಾ ಪಾವಿತ್ರ್ಯತೆಯ ಕ್ರಮಗಳನ್ನು ಮಕ್ಕಳು  ಶ್ಲಾಘಿಸಿದರು.

ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿನಿ, ತಮ್ಮೂರಿಗೆ ಇನ್ನು ಪೂರ್ಣಪ್ರಮಾಣದಲ್ಲಿ ಬಸ್ ಸಂಚಾರವಿಲ್ಲದೇ ಇರುವುದರಿಂದ ಬಸ್ ಸೌಲಭ್ಯ ಒದಗಿಸುವ ಕುರಿತ ಅವಳ ಆತಂಕ ನಿವಾರಿಸಿದ ಸಚಿವರು ಬಸ್ ಸೌಲಭ್ಯ ಒದಗಿಸುವ ಕುರಿತು ಇಂದು ನಿಮ್ಮ ಜಿಲ್ಲಾಧಿಕಾರಿಗಳ ಗಮನಕ್ಕೆ ವಿಷಯ ತರಲಾಗುವುದು. ನೀವು ಪರೀಕ್ಷೆ ತಯಾರಾಗುವುದಕ್ಕೆ ಮಾತ್ರವೇ ತಮ್ಮ  ಏಕಾಗ್ರತೆ ಇರಲಿ ಎಂದು ಸುರೇಶ್ ಕುಮಾರ್ ಅಭಯ ನೀಡಿದರು.

ಪರೀಕ್ಷೆ ಬರೆಯಲು ಸಾಕ್ಷಿ:

ಕಾರವಾರ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷಿ ಎಂಬ ವಿದ್ಯಾರ್ಥಿನಿ, ʼನೀವು ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಯುತ್ತದೆ ಮತ್ತು ಪರೀಕ್ಷೆ ಬರೆಯುವ ಮೂಲಕವೇ ನಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಅವಕಾಶ ನೀಡಿರುವುದರಿಂದ ನಾವೆಲ್ಲ ಧೈರ್ಯವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯಲು ಸಿದ್ಧವಾಗಿರುವುದಕ್ಕೆ ನಾನೇ ಸಾಕ್ಷಿʼ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದಾಗ ಮುಕ್ತ ಸಂವಾದದಲ್ಲಿ ಭಾಗಿಯಾದ ರಾಜ್ಯದ 1000ಕ್ಕೂ ಹೆಚ್ಚು ಮಕ್ಕಳು ಖುಷಿಯಿಂದ ಚಪ್ಪಾಳೆ ತಟ್ಟಿ  ತಾವೆಲ್ಲ ಪರೀಕ್ಷೆ ಬರೆಯಲು ದಿನಗಣನೆ ಮಾಡುತ್ತಿರುವುದನ್ನು ಮುಕ್ತವಾಗಿ ಹಂಚಿಕೊಂಡರು.

ಪರೀಕ್ಷೆ ನಡೆಸದೇ ಹೋಗಿದ್ದರೆ ನಾವು ಕೊರೋನಾ ಬ್ಯಾಚ್ನಲ್ಲಿ ಪರೀಕ್ಷೆ ಬರೆಯದೇ ಪಾಸಾದವರೆಂಬ ಒಂದು ಅಪಖ್ಯಾತಿ ನಮ್ಮ ಮೇಲೆ ಉಳಿದುಬಿಡುತ್ತಿತ್ತೇನೋ ಎಂಬ ಆತಂಕ ನಮ್ಮಲ್ಲಿ ಉಳಿಯದಂತೆ ಮಾಡಿದ್ದಕ್ಕೆ ನಾವು ಕರ್ನಾಟಕ ಸರ್ಕಾರಕ್ಕೆ ನಮ್ಮ ಕೃತಜ್ಞತೆಗಳನ್ನು ತಿಳಿಸಲು ಈ ವೇದಿಕೆಯನ್ನು ಮೊದಲು ಬಳಸಿಕೊಳ್ಳುತ್ತೇವೆಂದು ಅನೇಕ ಮಕ್ಕಳು ಹೇಳಿದ್ದು ವೈಯಕ್ತಿಕವಾಗಿ ನಮ್ಮ ಅಧಿಕಾರಿಗಳು, ಶಿಕ್ಷಕರು ಮತ್ತು ನಮಗೆಲ್ಲರಿಗೂ ಅತ್ಯಂತ ಖುಷಿಯಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಇಳಿಮುಖವಾದ ಕೊರೋನಾ- ಭಯ ಬೇಡ:

ನಾವು ಪರೀಕ್ಷೆ ಮಾಡಲು ಮುಂದಾದಾಗ ನಮ್ಮ ಮುಖ್ಯಮಂತ್ರಿಯವರು ಕೊರೋನಾ ಪ್ರಕರಣಗಳು ಕಡಿಮೆಯಾದರೆ ಮಾತ್ರವೇ ಪರೀಕ್ಷೆ ಮಾಡಲು ಮುಂದಾಗುತ್ತೇವೆ ಎಂದು ಹೇಳಿದಂತೆ ಈಗ ನಾವು ಪರೀಕ್ಷೆ ನಡೆಸಲು ಮುಂದಾಗಿದ್ದೇವೆ ಎಂದು ಸುರೇಶ್  ಕುಮಾರ್ ತಿಳಿಸಿದರು.

ಕಳೆದ ವರ್ಷ ಪರೀಕ್ಷೆ ನಡೆಸಿದಾಗ ಕೊರೋನಾ ಪಾಸಿಟಿವಿಟಿ ದರ 13.2ರಷ್ಟಿದ್ದರೆ ಅದು ಈ ವರ್ಷ 1.7ರ ಆಸುಪಾಸಿನಲ್ಲಿದೆ, ಈ ಬಾರಿಯ ಪರೀಕ್ಷೆ ಕಳೆದ ಬಾರಿಯ ಪರೀಕ್ಷೆಗಿಂತ ಹೆಚ್ಚಿನ ಸುರಕ್ಷಿತ ವಾತಾವರಣದಲ್ಲಿ ನಡೆಯಲಿದೆ. ಪರೀಕ್ಷಾ ಕೇಂದ್ರಗಳು ದ್ವಿಗುಣವಾಗಿವೆ. ಪರೀಕ್ಷಾ ಕೊಠಡಿಗಳು ಮೂರು ಪಟ್ಟು ಹೆಚ್ಚಾಗಿವೆ. ಪ್ರಶ್ನೆ ಪತ್ರಿಕೆಗೆ ಉತ್ತರಿಸಲು ಸಾಕಷ್ಟು ಸಮಯಾವಕಾಶ ದೊರೆಯಲಿದೆ. ಕೇವಲ ಎರಡೇ ದಿನಗಳ ಕಾಲ ಪರೀಕ್ಷೆ ನಡೆಯುವುದರಿಂದ ಯಾವುದೇ ತೊಂದರೆಗೆ ಅವಕಾಶವೇ ಇಲ್ಲ. ರಾಜ್ಯದ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಮತ್ತು ಪರೀಕ್ಷೆಗಳು ಸುರಕ್ಷಿತ ವಾತಾವರಣದಲ್ಲಿ ನಡೆಯುತ್ತಿರುವ ಕುರಿತು ನಮಗೆಲ್ಲಾ ಭರವಸೆಯಿದ್ದು ತಮ್ಮ ಪೋಷಕರು ನಮ್ಮನ್ನು ಧೈರ್ಯವಾಗಿ ಪರೀಕ್ಷೆಗೆ ಕಳಿಸಲು ಉತ್ಸುಕರಾಗಿದ್ದಾರೆಂದು ಮಕ್ಕಳು ಹೇಳಿದರು.

ರಾಜ್ಯದ 34ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐ ಕಚೇರಿ ಮತ್ತು ಡಯಟ್ ಕೇಂದ್ರಗಳಲ್ಲಿ ಹಾಜರಿದ್ದ ಮಕ್ಕಳು ಸಚಿವರೊಂದಿಗೆ ಪರೀಕ್ಷೆ ಕುರಿತ ತಮ್ಮ ಶಂಕೆಗಳನ್ನು ನಿವಾರಿಸಿಕೊಂಡರು. 90 ಮಕ್ಕಳು ನೇರವಾಗಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...