ಗ್ರಾಮೀಣ ಪ್ರದೇಶದ ಜನತೆಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರಗಳನ್ನು ಆರಂಭಿಸಲು ತೀರ್ಮಾನಿಸಲಾಗಿದ್ದು, ಈ ಕುರಿತು ಈಗಾಗಲೇ ಆದೇಶ ಹೊರಬಿದ್ದಿದೆ.
ಆಧಾರ್ ಇಂದು ಬಹುತೇಕ ಎಲ್ಲ ಸೇವೆಗಳಿಗೆ ಅನಿವಾರ್ಯವಾಗಿದ್ದು, ಕೊರೊನಾ ಲಸಿಕೆ ಪಡೆಯಲು ಸಹ ಆಧಾರ್ ಸಂಖ್ಯೆ ಬೇಕಾಗುತ್ತದೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಕೆಲವರು ಇನ್ನೂ ಸಹ ಆಧಾರ್ ನೋಂದಣಿ ಮಾಡದ ಕಾರಣ ಅನಾನುಕೂಲವಾಗಿದೆ.
ಆಧಾರ್ ನೋಂದಣಿ ಮಾಡಿಸಲು ಅಥವಾ ತಿದ್ದುಪಡಿಗಾಗಿ ಗ್ರಾಮೀಣ ಪ್ರದೇಶದ ಜನತೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ನಗರ ಪ್ರದೇಶಕ್ಕೆ ಬರಬೇಕಾಗಿರುವ ಕಾರಣ ಈ ಪ್ರಕ್ರಿಯೆ ವಿಳಂಬವಾಗುತ್ತಿತ್ತು.
ಇದೆಲ್ಲವನ್ನು ಮನಗಂಡು ರಾಜ್ಯ ಸರ್ಕಾರ ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದ್ದು, ತಿದ್ದುಪಡಿಗಾಗಿ ಪ್ರತಿಯೊಬ್ಬರಿಗೆ ಕೇವಲ 50 ರೂ. ಶುಲ್ಕ ವಿಧಿಸಲಾಗುತ್ತದೆ. ಇನ್ನು ಐದು ವರ್ಷದೊಳಗಿನ ಮಕ್ಕಳ ಆಧಾರ್ ನೋಂದಣಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ತಿಳಿದುಬಂದಿದೆ.