ಬೆಂಗಳೂರು: 18 ತಿಂಗಳ ತುಟ್ಟಿಭತ್ಯೆ ಬಿಡುಗಡೆ, ಎನ್.ಪಿ.ಎಸ್. ರದ್ದುಗೊಳಿಸುವುದು ಮತ್ತು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 15 ರಂದು ಸರ್ಕಾರಿ ನೌಕರರು ಪ್ರತಿಭಟನೆ ಕೈಗೊಂಡಿದ್ದಾರೆ.
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದಿಂದ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಎನ್.ಪಿ.ಎಸ್. ರದ್ದುಗೊಳಿಸಬೇಕು. ನಿಶ್ಚಿತ ಪಿಂಚಣಿ ನೀಡಬೇಕೆಂದು ಒತ್ತಾಯಿಸಲಾಗಿದೆ. ಶಾಲಾ ಶಿಕ್ಷಕರು, ಫ್ರಂಟ್ಲೈನ್ ವಾರಿಯರ್ ಗಳು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರೆಲ್ಲರಿಗೂ ಪರಿಹಾರ ನೀಡಬೇಕು. ಎಲ್ಲರಿಗೂ ಉಚಿತವಾಗಿ ಶೀಘ್ರವೇ ಲಸಿಕೆ ನೀಡಬೇಕು. ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 2.80 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಜುಲೈ 15 ರಂದು ಊಟದ ವಿರಾಮದ ವೇಳೆ ಕೋವಿಡ್ ನಿಯಮ ಪಾಲನೆಯೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಲಾಗಿದೆ.