ಬೆಂಗಳೂರು: ಗರ್ಭಿಣಿಯರಿಗೆ ಕೊರೋನಾ ಲಸಿಕೆ ಸುರಕ್ಷಿತವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕೋವಿಡ್ ಲಸಿಕೆಯನ್ನು ಗರ್ಭಿಣಿಯರು ಪಡೆದುಕೊಂಡರೆ ಅಡ್ಡಪರಿಣಾಮ ಉಂಟಾಗುವುದಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೆಲವು ದಿನಗಳ ಹಿಂದೆ ಕೇಂದ್ರ ಆರೋಗ್ಯ ಮಂತ್ರಾಲಯ, ಗರ್ಭಿಣಿಯರಿಗೆ ಲಸಿಕೆ ನೀಡುವ ಕುರಿತಾಗಿ ಮಾರ್ಗಸೂಚಿ ಹೊರಡಿಸಿದೆ. ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಮಂತ್ರಾಲಯ ತಿಳಿಸಿದ್ದರೂ, ರಾಜ್ಯದಲ್ಲಿ ಅನೇಕ ಗರ್ಭಿಣಿಯರು ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ ನೀಡಲಾಗಿದೆ. ಗರ್ಭಿಣಿಯರು ಸೇರಿದಂತೆ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ.
ಕೊರೋನಾ ಸೋಂಕಿತ ಗರ್ಭಿಣಿಯರು ಗಂಭೀರ ಸ್ವರೂಪದ ಕಾಯಿಲೆ ಎದುರಿಸುವ ಸಂಭವ ಹೆಚ್ಚಿರುತ್ತದೆ. ಭ್ರೂಣದ ಮೇಲೆ ಪರಿಣಾಮ ಬೀರಬಹುದಾದ ಸಾಧ್ಯತೆ ಇರುತ್ತದೆ. ಹಾಗಾಗಿ, ಗರ್ಭಿಣಿಯರು ಕೊರೋನಾ ಲಸಿಕೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಇನ್ನು ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆ, 35 ವರ್ಷ ಮೇಲ್ಪಟ್ಟವರು, ಅಧಿಕ ತೂಕ ಹೊಂದಿದವರು, ರಕ್ತ ಹೆಪ್ಪುಗಟ್ಟುವ ಅಪಾಯ ಇರುವ ಗರ್ಭಿಣಿಯರಿಗೆ ಕೊರೋನಾ ಸೋಂಕು ಅಪಾಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಅವಧಿಪೂರ್ವ ಹೆರಿಗೆ, ಶಿಶುವಿನ ತೂಕ ಕಡಿಮೆ, ಅಪರೂಪದಲ್ಲಿ ಸನ್ನಿವೇಶದಲ್ಲಿ ಶಿಶು ಮರಣ ಹೊಂದುವ ಸಾಧ್ಯತೆ ಇದೆ. ಲಸಿಕೆಯನ್ನು ಗರ್ಭಾವಸ್ಥೆಯ ಯಾವುದೇ ಸಮಯದಲ್ಲಿ ಪಡೆದುಕೊಳ್ಳಬಹುದು. ಆದರೆ, ಆದಷ್ಟು ಬೇಗನೆ ಗರ್ಭಿಣಿಯರು ಲಸಿಕೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗಿದೆ.