ಕೊರೊನಾದ ಈ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಹಣದ ಅವಶ್ಯಕತೆ ಅನೇಕರಿಗಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗಾಗಿ ʼಕವಚ್ʼ ವೈಯಕ್ತಿಕ ಸಾಲ ಯೋಜನೆಯನ್ನ ಪರಿಚಯಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಎಸ್ಬಿಐ, ಎಸ್ಬಿಐ ಕಡೆಯಿಂದ ಕವಚ್ ವೈಯಕ್ತಿಕ ಸಾಲ ಯೋಜನೆಯನ್ನ ಪರಿಚಯಿಸುತ್ತಿದ್ದೇವೆ. ಕೋವಿಡ್ ಚಿಕಿತ್ಸೆಗಾಗಿ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆರ್ಥಿಕ ಸಹಾಯವನ್ನ ಈ ಮೂಲಕ ನೀಡುತ್ತಿದ್ದೇವೆ ಎಂದು ಬರೆದಿದೆ.
ಎಸ್ಬಿಐ ಗ್ರಾಹಕರಿಗೆಂದೇ ಕವಚ್ ವೈಯಕ್ತಿಕ ಸಾಲದ ಯೋಜನೆಯನ್ನ ಪರಿಚಯಿಸಲಾಗಿದ್ದು, ಈ ಸಾಲಕ್ಕೆ 8.50 ಪ್ರತಿಶತ ಬಡ್ಡಿದರ ಇರಲಿದೆ. ಈ ವೈಯಕ್ತಿಕ ಸಾಲವನ್ನ ಪಡೆಯುವ ಮುನ್ನ ಗ್ರಾಹಕರು ಈ ಕೆಳಗಿನ ಹಂತಗಳನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು.
1. ಕವಚ್ ವೈಯಕ್ತಿಕ ಸಾಲ ಯೋಜನೆಯ ಅಡಿಯಲ್ಲಿ ಗರಿಷ್ಠ 5 ಲಕ್ಷದವರೆಗೆ ಸಾಲ ಸೌಲಭ್ಯ ಸಿಗಲಿದೆ.
2. 60 ತಿಂಗಳೊಳಗಾಗಿ ಸಾಲದ ಸಂಪೂರ್ಣ ಮೊತ್ತವನ್ನ ಬ್ಯಾಂಕ್ಗೆ ಮರುಪಾವತಿ ಮಾಡಬೇಕು. ಇದು ಮೂರು ತಿಂಗಳ ಮೊರಟೋರಿಯಂ ಅವಧಿಯನ್ನ ಹೊಂದಿದೆ.
3. ಈ ಸಾಲ ಸೌಲಭ್ಯವನ್ನ ಪಡೆಯಲು ಗ್ರಾಹಕರು ಕೋವಿಡ್ 19 ಪಾಸಿಟಿವ್ ವರದಿಯನ್ನ ಸಲ್ಲಿಸಬೇಕು.
ಎಸ್ಬಿಐ ವೆಬ್ಸೈಟ್ನಲ್ಲಿ ನೀಡಲಾದ ವರದಿಯ ಪ್ರಕಾರ 2021ರ ಏಪ್ರಿಲ್ 1ನೇ ತಾರೀಖು ಅಥವಾ ಅದರ ನಂತರದ ದಿನಗಳಲ್ಲಿ ಕೋವಿಡ್ ಪಾಸಿಟಿವ್ಗೆ ಒಳಗಾದ ಎಸ್ಬಿಐ ಗ್ರಾಹಕ ಅಥವಾ ಅವರ ಕುಟುಂಬ ಸದಸ್ಯರು ಕೋವಿಡ್ ಚಿಕಿತ್ಸೆಗಾಗಿ ಈ ಸಾಲವನ್ನ ಬಳಸಿಕೊಳ್ಳಬಹುದು. ಇದು ಉದ್ಯೋಗಿಗಳು, ನಿರುದ್ಯೋಗಿಗಳು ಹಾಗೂ ಪಿಂಚಣಿದಾರರನ್ನ ಒಳಗೊಂಡಿದೆ.