ಮೈಸೂರು: ಸಿಎಂ ಯಡಿಯೂರಪ್ಪ ಬಗ್ಗೆ ಮಾತಾಡಿದ್ರೆ ಸುಟ್ಟು ಹೋಗ್ತೀನಿ ಎಂದು ಕೆಲವು ದಿನಗಳ ಹಿಂದಷ್ಟೇ ಹೇಳಿ ನಾಯಕತ್ವ ಬದಲಾವಣೆ ಗೊಂದಲಕ್ಕೆ ತೆರೆ ಎಳೆದಿದ್ದ ಸಚಿವ ಸಿ.ಪಿ. ಯೋಗೇಶ್ವರ್ ಈಗ ಸಿಎಂ ವಿರುದ್ಧವೇ ಮತ್ತೆ ಸಿಡಿದೆದ್ದಿದ್ದಾರೆ.
ನಾಯಕತ್ವ ಬದಲಾವಣೆ ಕೂಗೆಬ್ಬಿಸಿದ ಸಿ.ಪಿ. ಯೋಗೇಶ್ವರ್ ಒಳಗೊಳಗೆ ರಣತಂತ್ರ ಹೆಣೆದಿದ್ದಾರೆ. ಸೈಲೆಂಟಾಗಿಯೇ ದಾಳ ಉರುಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಿ.ಪಿ. ಯೋಗೇಶ್ವರ್ ಮತ್ತು ರಾಜ್ಯದ ಪ್ರಮುಖ ನಾಯಕರೊಬ್ಬರು ಭೇಟಿಯಾಗಿ ಸಮಾಲೋಚನೆ ನಡೆಸಿದ್ದು, ಸಿಎಂ ವಿರುದ್ಧ ಪ್ರಮುಖ ಅಸ್ತ್ರ ಪ್ರಯೋಗಿಸುವ ತಂತ್ರಕ್ಕೆ ಮುಂದಾಗಿದ್ದಾರೆನ್ನಲಾಗಿದೆ.
ದೆಹಲಿಯ ದಂಡಯಾತ್ರೆಯ ನಂತರ ಸಿ.ಪಿ. ಯೋಗೇಶ್ವರ್ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಸಂಸದ ಶ್ರೀನಿವಾಸಪ್ರಸಾದ್ ಮನೆಗೆ ಭೇಟಿ ನೀಡಿದ್ದಾರೆ. ಅವರ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಹಿಂದೆ ಶ್ರೀನಿವಾಸಪ್ರಸಾದ್ ನಿವಾಸಕ್ಕೆ ಅನೇಕ ಶಾಸಕರು ಭೇಟಿ ನೀಡಿದ ನಂತರದಲ್ಲಿ ಶಾಸಕರು ಮುಂಬೈಗೆ ಪ್ರಯಾಣ ಬೆಳೆಸಿದ್ದರು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಇಲ್ಲಿದಂದಲೇ ಕಾರ್ಯತಂತ್ರ ರೂಪಿಸಲಾಗಿತ್ತು.
ಈಗ ಯೋಗೇಶ್ವರ್ ಮತ್ತು ಶ್ರೀನಿವಾಸ್ ಪ್ರಸಾದ್ ಅವರು ಭೇಟಿಯಾಗಿ ಸಮಾಲೋಚನೆ ನಡೆಸಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಭೇಟಿಯ ಬಳಿಕ ಯೋಗೇಶ್ವರ್ ಮಾತಾಡಿದ ಧಾಟಿ ಗಮನಿಸಿದಾಗ ನಾಯಕತ್ವ ಬದಲಾವಣೆ ಬಗ್ಗೆ ಬಹುದೊಡ್ಡ ಪ್ಲಾನ್ ಮಾಡಿರುವಂತಿದೆ ಎನ್ನಲಾಗ್ತಿದೆ.
ಶ್ರೀನಿವಾಸ ಪ್ರಸಾದ್ ಭೇಟಿ ನಂತರ ಮಾತನಾಡಿದ ಸಚಿವ ಸಿ.ಪಿ. ಯೋಗೇಶ್ವರ್, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮತ್ತೆ ಸಿಡಿಗುಂಡು ಸಿಡಿಸಿದ್ದು, ಅಂಬಾರಿ ಹೊರಲು ಯಾವ ಆನೆ ಸೂಕ್ತ ಎನ್ನುವುದು ಮುಖ್ಯ. ರಾಜ್ಯದ ಜನತೆಯ ಸಮಸ್ಯೆಗೆ ಸ್ಪಂದಿಸುವವರು ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅಂದರೆ ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವ ಹುದ್ದೆಯಾಗಿದೆ. ಬಿಜೆಪಿ ಸರ್ಕಾರ ಬರಲು ನಾವು ಬಹಳಷ್ಟು ಶ್ರಮಿಸಿದ್ದೇವೆ. ಮುಖ್ಯಮಂತ್ರಿ ಹುದ್ದೆ ವೈಭವಕ್ಕೆ ಆಗುವಂತಹುದಲ್ಲ. ಮರಿ ಆನೆಗಳಿಗೆ ಅಂಬಾರಿ ಹೊರಿಸಲು ಆಗುವುದಿಲ್ಲ. ಬದಲಾವಣೆ ಜಗದ ನಿಯಮ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.