ದೆಹಲಿಯ ಅಮನ್ ವಿಹಾರದ 28 ವರ್ಷದ ವ್ಯಕ್ತಿ ಕುಟುಂಬಸ್ಥರಿಗೆ ಮಾಹಿತಿ ನೀಡದೇ ರಿಷಿಕೇಶಕ್ಕೆ ಓಡಿಹೋಗಿದ್ದು ಮಾತ್ರವಲ್ಲದೇ ಅತ್ಯಂತ ದೊಡ್ಡ ಡ್ರಾಮಾ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 25 ಲಕ್ಷ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿದ್ದ ಈತ ಈ ಹಣವನ್ನ ಪೋಷಕರು ಹಾಗೂ ಕುಟುಂಬಸ್ಥರಿಂದ ಪಡೆದುಕೊಳ್ಳಲು ದೊಡ್ಡ ನಾಟಕವನ್ನೇ ಮಾಡಿದ್ದ. ಈ ಪ್ರಕರಣದಲ್ಲಿ ಈತನಿಗೆ ಸಾಥ್ ನೀಡಿದ ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದಾರೆ.
ಹೈಡ್ರಾಮಾ ಮಾಡಿದ ಆರೋಪಿಯನ್ನ ಶುಭಂ ಎಂದು ಹಾಗೂ ಈತನ ಮಹಿಳಾ ಸ್ನೇಹಿತೆಯನ್ನ ಅನಿತಾ ಎಂದು ಗುರುತಿಸಲಾಗಿದೆ. ವಿವಾಹಿತೆಯಾಗಿರುವ ಅನಿತಾ ಶುಭಂ ಸಹೋದ್ಯೋಗಿ ಪತ್ನಿ ಆಗಿದ್ದಳು ಎನ್ನಲಾಗಿದೆ.
ಜೂನ್ 29ರಂದು ಶುಭಂ ತಂದೆ ಸುನೀಲ್ ಗರ್ಗ್ ಪುತ್ರ ಅಪಹರಣವಾಗಿದ್ದಾನೆ ಎಂದು ದೂರನ್ನ ದಾಖಲಿಸಿದ್ದರು. ಪೊಲೀಸರಿಗೆ ಶುಭಂ ಕೊನೆಯ ಬಾರಿಗೆ ರೋಹಿಣಿ ಸೆಕ್ಟರ್ 22ನ ಹೋಟೆಲ್ನಲ್ಲಿ ಕಂಡಿದ್ದ ಎಂಬ ಮಾಹಿತಿ ಲಭ್ಯವಾಗಿತ್ತು. ಇನ್ನೂ ಹೆಚ್ಚಿನ ತನಿಖೆ ನಡೆಸಿದ ವೇಳೆ ಅನಿತಾ, ಶುಭಂ ಪೋಷಕರಿಗೆ ಕರೆ ಮಾಡಿ ಶುಭಂ ಸಾಲದ ಸುಳಿಯಲ್ಲಿ ಸಿಲುಕಿದ್ದು ಆತನಿಗೆ 25 ಲಕ್ಷ ರೂಪಾಯಿ ಅವಶ್ಯಕತೆ ಇದೆ ಎಂದು ಹೇಳಿದ್ದಳು.
ಈಕೆ ಶುಭಂ ಪೋಷಕರಿಗೆ 5 ಬೇರೆ ಬೇರೆ ಖಾತೆಗಳ ವಿವರಣೆ ನೀಡಿ ಇವಕ್ಕೆ ಒಟ್ಟು 25 ಲಕ್ಷ ರೂಪಾಯಿ ಜಮೆ ಮಾಡುವಂತೆ ಹೇಳಿದ್ದರು. ಅನಿತಾಗಾಗಿ ಶೋಧ ನಡೆಸಿದ ಪೊಲೀಸರು ಆಗ್ರಾದಲ್ಲಿ ಆಕೆಯನ್ನ ಪತ್ತೆ ಮಾಡಿದ್ದಾರೆ. ವಿಚಾರಣೆ ವೇಳೆ ಈಕೆ ತಾನು ಶುಭಂ ಜೊತೆ ಸಂಪರ್ಕದಲ್ಲಿ ಇರೋದಾಗಿಯೂ ಇದು ಇಬ್ಬರು ಸೇರಿ ಮಾಡಿದ ನಾಟಕ ಎಂದು ಬಾಯ್ಬಿಟ್ಟಿದ್ದಾಳೆ.
ವಿಚಾರಣೆಯ ವೇಳೆ ಶುಭಂ ತನ್ನ ಹಾಗೂ ಅನಿತಾ ನಡುವೆ ಇದ್ದ ಅಕ್ರಮ ಸಂಬಂಧದ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ. ಅನಿತಾ ಶುಭಂ ಸಹೋದ್ಯೋಗಿಯ ಪತ್ನಿಯಾಗಿದ್ದಳು. ಶುಭಂ ಬಡ್ಡಿಯ ಮೇಲೆ ಸಾಲ ತೆಗೆದುಕೊಂಡು ಅದನ್ನ ಮಜಾ ಮಾಡಿ ಹಾಳು ಮಾಡಿದ್ದ.
ಈ ಸಾಲವನ್ನ ಪಾವತಿ ಮಾಡಲು ಇನ್ನೊಂದು ಕಡೆ ಸಾಲ ಮಾಡಿದ್ದ. ಎಲ್ಲಾ ಸೇರಿ ಈ ಹಣ 25 ಲಕ್ಷ ರೂಪಾಯಿ ಸಾಲ ಶುಭಂ ಹೆಗಲೇರಿತ್ತು. ಈ ಹಣವನ್ನ ಪಾವತಿ ಮಾಡೋದು ಶುಭಂ ಕೈಯಲ್ಲಿ ಸಾಧ್ಯವಿರಲಿಲ್ಲ. ಹೀಗಾಗಿ ಅಪಹರಣದ ನಾಟಕವಾಡಿ ಹಣ ದೋಚಲು ಯತ್ನಿಸಿದ್ದ ಎಂದು ತಿಳಿದುಬಂದಿದೆ.