ಡೆಹ್ರಾಡೂನ್: ಉತ್ತರಾಖಂಡ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ ಸಿಂಗ್ ಧಾಮಿಯವರನ್ನು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ನಾಲ್ಕು ತಿಂಗಳ ಹಿಂದಷ್ಟೇ ಉತ್ತರಾಖಂಡ್ ಸಿಎಂ ಹುದ್ದೆಗೇರಿದ್ದ ತೀರಥ್ ಸಿಂಗ್ ರಾವತ್ ನಿನ್ನೆಯಷ್ಟೇ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ನೂತನ ಸಿಎಂ ಆಯ್ಕೆಯಾಗಿದ್ದು, 57 ಬಿಜೆಪಿ ಶಾಸಕರ ಸಭೆಯಲ್ಲಿ ಪುಷ್ಕರ್ ಸಿಂಗ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ.
ಉತ್ತರಾಖಂಡ್ ನ 10ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಪುಷ್ಕರ್ ಸಿಂಗ್ ಖತಿಮಾ ಕ್ಷೇತ್ರದ ಶಾಸಕರಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಪ್ತರು. ನಾಲ್ಕು ತಿಂಗಳ ಅಂತರದಲ್ಲಿ ಉತ್ತರಾಖಂಡ್ ಮೂರು ಮುಖ್ಯಮಂತ್ರಿಗಳನ್ನು ಕಂಡಂತಾಗಿದೆ. ತೀರಥ್ ಸಿಂಗ್ ಗೂ ಮುನ್ನ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ತೀರಥ್ ಸಿಂಗ್ ಸೆ.10ರೊಳಗೆ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವ ಅನಿವಾರ್ಯವಿತ್ತು. ಆದರೆ ಸಧ್ಯ ಉಪಚುನಾವಣೆ ನಡೆಯಲು ಚುನಾವಣಾ ಆಯೋಗ ಅವಕಾಶ ನೀಡುವುದು ಅನುಮಾನವಾಗಿದ್ದಲ್ಲದೇ ಕುಂಭಮೇಳದ ಸಮಯದಲ್ಲಿ ನಕಲಿ ಆರ್ ಟಿ ಪಿ ಸಿ ಆರ್ ಟೆಸ್ಟ್ ಆರೋಪ ಕೂಡ ತೀರಥ್ ವಿರುದ್ಧ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು ಎನ್ನಲಾಗಿದೆ.