ದೇಶದಲ್ಲಿ 2.5 ಕೋಟಿಗೂ ಅಧಿಕ ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ವಲಯದ ವ್ಯಾಪಾರಿಗಳನ್ನ ಸಣ್ಣ ಹಾಗೂ ಮಧ್ಯಮ ಉದ್ಯಮಗಳ (ಎಂಎಸ್ಎಂಇ) ವ್ಯಾಪ್ತಿಗೆ ಸೇರಿಸಲಾಗುವುದು ಎಂದು ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳ ಅಡಿಯಲ್ಲಿ ಸಾಲ ಸೌಲಭ್ಯಗಳನ್ನ ಪಡೆಯೋದು ಈ ವ್ಯಾಪಾರಿಗಳಿಗೆ ಸುಲಭವಾಗಲಿ ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ನಿತಿನ್ ಗಡ್ಕರಿ, ಈ ಹಿಂದೆ ಎಂಎಸ್ಎಂಇ ವ್ಯಾಪ್ತಿಯಿಂದ ಹೊರಗಿದ್ದ ಚಿಲ್ಲರೆ ಹಾಗೂ ಸಗಟು ವ್ಯಾಪಾರಗಳು ಇನ್ಮುಂದೆ ಹೊಸ ಮಾರ್ಗಸೂಚಿಯ ಅನ್ವಯದಂತೆ ಎಂಎಸ್ಎಂಇ ವ್ಯಾಪ್ತಿಗೆ ಬರಲಿದೆ.
ಕೇಂದ್ರ ಸರ್ಕಾರ ಎಂಎಸ್ಎಂಇ ಕ್ಷೇತ್ರವನ್ನ ಬಲಪಡಿಸಲು ಯತ್ನಿಸುತ್ತಿದೆ. ಹೀಗಾಗಿಯೇ ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳನ್ನ ಈ ವ್ಯಾಪ್ತಿಗೆ ಸೇರಿಸಲಾಗಿದ್ದು ಇವರಿಗೂ ಆದ್ಯತೆಯ ಆಧಾರದ ಮೇಲೆ ಆರ್ಬಿಐ ಸೂಚನೆಯಂತೆ ಸಾಲ ಸೌಲಭ್ಯ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಕೋವಿಡ್ 10 ಎರಡನೆ ಅಲೆಯಿಂದ ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳಿಗೆ ಭಾರೀ ಸವಾಲುಗಳು ಎದುರಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಸಂಕಷ್ಟದ ಈ ಸಮಯದಲ್ಲಿ ಆದ್ಯತೆಯ ಆಧಾರದ ಮೇಲೆ ಹಣಕಾಸಿನ ನೆರವು ನೀಡುವುದು ಸರ್ಕಾರದ ಉದ್ದೇಶವಾಗಿದೆ.