ಭಗವಾನ್ ಮಾಲಿ ಎಂಬಾತ ಕೆಲ ವಾರಗಳ ಹಿಂದಷ್ಟೇ ಬಾಲಿವುಡ್ ಹಾಡುಗಳನ್ನ ವಯೋಲಿನ್ನಲ್ಲಿ ನುಡಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದರು. ಹೋಟೆಲ್ನಲ್ಲಿ ಸಂಗೀತಗಾರನಾಗಿ ಕೆಲಸ ಮಾಡುತ್ತಿದ್ದ ಇವರು ಉದ್ಯೋಗ ಕಳೆದುಕೊಂಡ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದರು. ಅಜೀಬ್ ದಾಸತಾ ಹೈ ಯೇ…..ಕಹಾ ಶುರು ಕಹಾ ಕಥಮ್ ಎಂಬ ಬಾಲಿವುಡ್ನ ಪ್ರಸಿದ್ಧ ಹಾಡನ್ನ ವಯೋಲಿನ್ ಮೂಲಕ ನುಡಿಸಿದ್ದರು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಈ ಮಾಲಿ ಇದೀಗ ಮತ್ತೊಂದು ವಿಶೇಷ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಈತನ ಸಂಗೀತದ ಪ್ರತಿಭೆಯನ್ನ ಗಮನಿಸಿದ ಕೋಲ್ಕತ್ತಾ ಪೊಲೀಸ್ ಕಮಿಷನರ್ ಸೌಮೇನ್ ಮಿತ್ರಾ ಈತನನ್ನ ತಮ್ಮ ಕಚೇರಿಗೆ ಕರೆಸಿ ವಯೋಲಿನ್ ಅನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಇದು ಮಾತ್ರವಲ್ಲದೇ ಆರ್ಥಿಕ ಸಹಾಯದ ಭರವಸೆಯನ್ನೂ ನಗರ ಪೊಲೀಸ್ ಇಲಾಖೆ ನೀಡಿದೆ.
ಮಾಲಿ ಮೂಲತಃ ಗುಜರಾತ್ನವರಾಗಿದ್ದು ಬಳಿಕ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದಿದ್ದರು. ಡಾರ್ಜೆಲಿಂಗ್ ಹಾಗೂ ಸಿಲಿಗುರಿಯ ಪ್ರವಾಸಿ ಹೋಟೆಲ್ಗಳಲ್ಲಿ ಪ್ರದರ್ಶನ ನೀಡುವ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾದಿಂದಾಗಿ ಈತನ ಜೀವನಕ್ಕೆ ಆರ್ಥಿಕ ಸಂಕಷ್ಟದ ಬರೆ ಬಿದ್ದಿದೆ. ಬೀದಿಯಲ್ಲೇ ಪತ್ನಿ ಜೊತೆ ವಾಸಿಸುತ್ತಿದ್ದ ಮಾಲಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.