ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಭವನವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೌಕರರ ಬೇಡಿಕೆಗಳನ್ನು ಅನೇಕ ಬೇಡಿಕೆಗಳನ್ನು ಈಡೇರಿಸಲಾಗಿದೆ. ನೌಕರರು ಮತ್ತು ಅವರ ಕುಟುಂಬದವರಿಗೆ ನಗದು ರಹಿತ ಹೊಸ ಚಿಕಿತ್ಸೆ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎಂದು ತಿಳಿಸಿದ್ದಾರೆ.
ನೌಕರರ ಮೇಲಿನ ಅನಾಮಧೇಯ ದೂರುಗಳಿಗೆ ಸರ್ಕಾರದ ತನಿಖೆ ಅಗತ್ಯವಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ತುಟ್ಟಿಭತ್ಯೆ, ಮನೆ ಬಾಡಿಗೆ ಏರಿಕೆ, 5ನೇ ವೇತನ ಆಯೋಗದ ಅಂತಿಮ ವರದಿ ಅನುಷ್ಠಾನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಹಿಳಾ ನೌಕರರಿಗೆ ಆರು ತಿಂಗಳ ಶಿಶುಪಾಲನಾ ರಜೆ ಘೋಷಿಸಲಾಗಿದೆ. ಕುಂದುಕೊರತೆ ಆಲಿಸಲು ಜಿಲ್ಲಾಧಿಕಾರಿ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಜಂಟಿ ಸಮಾಲೋಚನೆ ಸಮಿತಿಯನ್ನು ರಚಿಸಲಾಗಿದೆ. ಅಲ್ಲದೆ, ನೌಕರರು ಮುಕ್ತವಾಗಿ ಕೆಲಸ ಮಾಡಲು ಅನುಕೂಲವಾದ ವಾತಾವರಣ ಸೃಷ್ಟಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಿಎಂ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಬಿ.ವೈ. ರಾಘವೇಂದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಸೇರಿದಂತೆ ಹಲವರು ಇದ್ದರು.