ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತೆ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾಂಗ್ರೆಸ್ ಕಾರಣ ಹೊರತು ಜಾತ್ಯಾತೀತದ ವಾದದಿಂದಾಗಿ ಅಲ್ಲ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಜೆಡಿಎಸ್ ಎಂಬ ಪಕ್ಷವೇ ಇಲ್ಲ, ಜೆಡಿಎಸ್ ಅನ್ನು ಮುಗಿಸಿದ್ದೇವೆ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಧಿವೇಶನ ಕರೆಯಲಿ ಜೆಡಿಎಸ್ ಏನೆಂಬುದನ್ನು ತೋರಿಸುತ್ತೇವೆ. ಜೆಡಿಎಸ್ ಆಟ ಇನ್ಮುಂದೆ ಶುರುವಾಗಲಿದೆ ಎಂದರು.
ಮೈತ್ರಿ ಸರ್ಕಾರದ ವೇಳೆ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಆ 17 ಶಾಸಕರಲ್ಲ. ಆ ದೇವರೇ ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಇಂತಹ ಸರ್ಕಾರದಲ್ಲಿ ಅಧಿಕಾರದಲ್ಲಿರುವುದು ಬೇಡ ಎಂದು ಕಾಪಾಡಿದ. ದೇವರೇ ನನ್ನ ಜೀವ ರಕ್ಷಣೆ ಮಾಡಿದ್ದಾನೆ. ಹಾಗಾಗಿ 17 ಜನ ಶಾಸಕರ ಮೇಲೆ ನನಗೆ ಯಾವ ಬೇಸರವೂ ಇಲ್ಲ ಎಂದು ವಿಶ್ಲೇಷಿಸಿದರು.
ಇನ್ನು ಚುನಾವಣೆಗೆ ಎರಡು ವರ್ಷ ಬಾಕಿ ಇದೆ. ಆಗಲೇ ಸಿಎಂ ಪಟ್ಟಕ್ಕಾಗಿ ಪೈಪೋಟಿ ಆರಂಭವಾಗಿದೆ. ಕಾಂಗ್ರೆಸ್ ನಲ್ಲಿ ಎಲ್ಲರೂ ಸಿಎಂ ಆಗಲು ಸಿದ್ಧರಾಗಿದ್ದಾರೆ. ಆಗಲೇ ಕಾಂಗ್ರೆಸ್ ನ 8 ಜನರು ಗರಿ ಗರಿ ಸೂಟು ಹೊಲಿಸಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ತಯಾರಿ ನಡೆಸಿದ್ದಾರೆ. ಚುನಾವಣೆಗೆ 2023ರವರೆಗೆ ಸಮಯವಿದೆ ಅದಕ್ಕೂ ಮೊದಲೇ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಯುತ್ತಿರುವುದು ಹಾಸ್ಯಾಸ್ಪದ ಎಂದರು.