ಬೆಂಗಳೂರು: ಬೆಂಗಳೂರು ಕರಗ ಮಹೋತ್ಸವದ ಉಳಿತಾಯ ಹಣದಲ್ಲಿ 21 ಲಕ್ಷ ರೂಪಾಯಿ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣ ಸಂಬಂಧ ಧರ್ಮರಾಯಸ್ವಾಮಿ ದೇವಸ್ಥಾನದ ಸಹಾಯಕ ಆಯುಕ್ತ ಹಾಗೂ ಆಡಳಿತಾಧಿಕಾರಿ ವೆಂಕಟರಮಣ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಪ್ರಸ್ತುತ ಯಾವುದೇ ಸಮಿತಿ ರಚನೆಯಾಗಿಲ್ಲ. ಜಿಲ್ಲಾಧಿಕಾರಿ, ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಪ್ರತಿ ವರ್ಷ ಕರಗ ಶಕ್ತ್ಯೋತ್ಸವ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ 2016ರಲ್ಲಿ ಬಿಬಿಎಂಪಿಯಿಂದ ಅನುದಾನ ಬಿಡುಗಡೆಯಾಗಿತ್ತು.
ಕರಗ ಉತ್ಸವಕ್ಕೆ ಖರ್ಚು ಮಾಡಿ ಉಳಿದಿದ್ದ 21.5 ಲಕ್ಷ ರೂಪಾಯಿ ಹಣವನ್ನು ನಿಶ್ಚಿತ ಠೇವಣಿ ಇಟ್ಟು 2018ರಲ್ಲಿ ಬಾಂಡ್ ಪಡೆಯಲಾಗಿದೆ. ಸಮಿತಿ ಇಲ್ಲದ ಕಾರಣ ಠೇವಣಿ ಬಾಂಡ್ ಆಡಳಿತಾಧಿಕಾರಿಗೆ ಹಸ್ತಾಂತರಿಸಬೇಕು. ಈ ಬಗ್ಗೆ ರಾಜಗೋಪಾಲ್ ಅವರಿಗೆ ಎರಡು ಬಾರಿ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಇಲ್ಲ ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.