ಕೋವಿಡ್-19 ಲಸಿಕೆ ಪಡೆಯುವ ಮೊದಲು ನೋವು ನಿವಾರಕ ಔಷಧಗಳನ್ನು ತೆಗೆದುಕೊಳ್ಳದಂತೆ ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಸೂಚನೆ ನೀಡಿದೆ.
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ವಿರುದ್ಧದ ಲಸಿಕೆ ಹಾಕಲಾಗುತ್ತಿದೆ. ಲಸಿಕೆ ಪಡೆದ ನಂತರ ವ್ಯಕ್ತಿಗಳು ಸೌಮ್ಯ ಮತ್ತು ಮಧ್ಯಮ ಅಡ್ಡಪರಿಣಾಮಗಳನ್ನು ಅನುಭವಿಸುವಂತಾಗಿದೆ. ವ್ಯಾಕ್ಸಿನೇಷನ್ ನಂತರ ಸಾಮಾನ್ಯ ಲಕ್ಷಣಗಳೆಂದರೆ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆದರೆ ನೋವು ಕಡಿಮೆ ಮಾಡಲು ನೋವು ನಿವಾರಕಗಳನ್ನು ಬಳಸಬೇಕೆ ? ಬೇಡವೇ ? ಎಂಬುದರ ಕುರಿತಾಗಿ ಮಾಹಿತಿ ಇಲ್ಲಿದೆ.
ಕೋವಿಡ್ -19 ಲಸಿಕೆ ಪಡೆಯುವ ಮೊದಲು ಸಂಭವನೀಯ ಅಡ್ಡಪರಿಣಾಮಗಳನ್ನು ತಡೆಯಲು ನೋವು ನಿವಾರಕಗಳನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಏಕೆಂದರೆ ಇದು ಲಸಿಕೆಯ ಪರಿಣಾಮಕಾರಿತ್ವದ ಮೇಲೆ ಪರಿಣಾಮ ಬೀರಬಹುದು. ವ್ಯಾಕ್ಸಿನೇಷನ್ ನಂತರ ಯಾರಿಗಾದರೂ ಜ್ವರ, ಮೈಕೈ ನೋವು, ತಲೆನೋವು, ಸ್ನಾಯು ನೋವು ಇದ್ದರೆ ಏನು ಮಾಡಬೇಕು ಎಂದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ನೋವು ನಿವಾರಕ ಅಥವಾ ಪ್ಯಾರಾಸಿಟಮಾಲ್ ಬಳಸಬಹುದು. ವ್ಯಾಕ್ಸಿನೇಷನ್ ನಂತರ ನೋವಿನಂತಹ ಅಡ್ಡಪರಿಣಾಮಗಳನ್ನು ನಿಯಂತ್ರಿಸಲು ನೋವು ನಿವಾರಕ ಅಥವಾ ಪ್ಯಾರಸಿಟಮಾಲ್ ಬಳಸಬಹುದು. ಆದರೆ, ವ್ಯಾಕ್ಸಿನೇಷನ್ ಪಡೆಯುವ ಮೊದಲು ಅದನ್ನು ತೆಗೆದುಕೊಳ್ಳಬಾರದು ಎಂದು ತಿಳಿಸಲಾಗಿದೆ.
ವ್ಯಾಕ್ಸಿನೇಷನ್ ಗೆ ಮೊದಲು ನೋವುನಿವಾರಕ ತೆಗೆದುಕೊಳ್ಳಬೇಡಿ:
ಹಲವಾರು ನಕಲಿ ಮತ್ತು ಸುಳ್ಳು ಪೋಸ್ಟ್ ಗಳು ಆನ್ಲೈನ್ ನಲ್ಲಿ ವೈರಲ್ ಆದ ನಂತರ, ವಿಶ್ವ ಆರೋಗ್ಯ ಸಂಸ್ಥೆ ಇಂತಹುದೊಂದು ಮಹತ್ವದ ಮಾಹಿತಿಯನ್ನು ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳ ಪ್ರಕಾರ, ಲಸಿಕೆಯ ಅಡ್ಡಪರಿಣಾಮಗಳನ್ನು ತಪ್ಪಿಸಲು ಕೋವಿಡ್-19 ಲಸಿಕೆ ಪಡೆಯುವ ಮೊದಲು ನೋವು ನಿವಾರಕಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.
ಈ ಕುರಿತು ವಿಶ್ವಸಂಸ್ಥೆಯ ವಕ್ತಾರರು ಸ್ಪಷ್ಟನೆ ನೀಡಿದ್ದು, ಅಡ್ಡ ಪರಿಣಾಮಗಳನ್ನು ತಡೆಗಟ್ಟಲು ಕೋವಿಡ್-19 ಲಸಿಕೆಯ ಪಡೆಯುವ ಮೊದಲು ಪ್ಯಾರಾಸಿಟಮಾಲ್ ತೆಗೆದುಕೊಳ್ಳಲು ಶಿಫಾರಸು ಮಾಡುವುದಿಲ್ಲ ಎಂದು ಹೇಳಿದ್ದಾರೆ.
ನೋವುನಿವಾರಕ ಲಸಿಕೆಯ ಪರಿಣಾಮಕಾರಿತ್ವವನ್ನು ಮಿತಿಗೊಳಿಸಬಹುದು: WHO
ಲಸಿಕೆಯ ಸಾಮಾನ್ಯ ಅಡ್ಡ ಪರಿಣಾಮಗಳಾದ ತೋಳಿನ ನೋವು, ತಲೆನೋವು, ಆಯಾಸ ಹೆಚ್ಚಿನ ಸಂದರ್ಭಗಳಲ್ಲಿ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ, ಆಂಟಿಹಿಸ್ಟಮೈನ್‌ಗಳು ಅಲರ್ಜಿಯ ಪ್ರತಿಕ್ರಿಯೆಯನ್ನು ಕಡಿಮೆ ಮಾಡಬಹುದಾದರೂ ಅವುಗಳನ್ನು ತಡೆಯಲು ಸಾಧ್ಯವಿಲ್ಲ. ನೀವು ಈಗಾಗಲೇ ಯಾವುದೇ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕೆಲವು ಜನರಿಗೆ ಆಂಟಿಹಿಸ್ಟಮೈನ್‌ಗಳು ಪಡೆಯಬಹುದು. ಇದಕ್ಕಾಗಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಬೇಕು. ಲಸಿಕೆಯ ಪರಿಣಾಮಕಾರಿತ್ವವನ್ನು ಮಿತಿಗೊಳಿಸುವುದರಿಂದ ಲಸಿಕೆ ಪಡೆಯುವ ಮೊದಲು ನೋವು ನಿವಾರಕ ಔಷಧಗಳನ್ನು ತೆಗೆದುಕೊಳ್ಳಲು ಯಾವುದೇ ಕಾರಣವಿಲ್ಲ ಎಂದು ತಜ್ಞರು ಹೇಳಿದ್ದಾರೆ.