
ನವದೆಹಲಿ: ಕೊರೋನಾ ಮೂರನೇ ಅಲೆ ಸನ್ನಿಹಿತವಾದ ಹಿನ್ನೆಲೆಯಲ್ಲಿ ಜುಲೈ 1 ರಿಂದ ಲಾಕ್ ಡೌನ್ ಜಾರಿಗೊಳಿಸಲಾಗುವುದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಪೋಸ್ಟ್ ಗಳು ಹರಿದಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 1 ರಿಂದ 31 ರವರೆಗೆ ಮೂರನೇ ಅಲೆ ತಡೆಯಲು ಲಾಲಕ್ ಡೌನ್ ಘೋಷಿಸಿದ್ದಾರೆ ಎಂದು ಪೋಸ್ಟ್ ಹರಿದಾಡುತ್ತಿದೆ.
ಕೋವಿಡ್ ಮೂರನೇ ಅಲೆ ಈಗಾಗಲೇ ಆರಂಭವಾಗಿದೆ ಎಂದು ನಕಲಿ ಸುದ್ದಿಯಲ್ಲಿ ಹೇಳಲಾಗಿದ್ದು, ಇದರ ಬಗ್ಗೆ ಪ್ರೆಸ್ ಇನ್ ಫಾರ್ಮೇಷನ್ ಬ್ಯೂರೋದ ಫ್ಯಾಕ್ಟ್ ಚೆಕ್ ತಂಡವು ಸ್ಪಷ್ಟ ಮಾಹಿತಿ ನೀಡಿದೆ. ಕೊರೋನಾ ಸಾಂಕ್ರಾಮಿಕ ರೋಗದ ನಡುವೆ ಜನರನ್ನು ದಾರಿತಪ್ಪಿಸಲು ಇಂತಹ ನಕಲಿ ಸುದ್ದಿಗಳು ಹರಿದಾಡುತ್ತಿದ್ದು, ಇವುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.
ಹರಿದಾಡುತ್ತಿರುವ ಪೋಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಲ್ಲೇಖಿಸಿದಂತೆ, ಮೂರನೇ ಅಲೆ ಆರಂಭವಾಗಿದೆ ಎಂದು ಹೇಳಲಾಗಿದೆ. ಜುಲೈ 1 ರಿಂದ ಲಾಕ್ ಡೌನ್ ಜಾರಿ ಮಾಡಲಾಗುವುದು ಎಂದು ಮೋದಿ ಹೇಳಿರುವುದಾಗಿ ತಿಳಿಸಲಾಗಿದೆ. ಪ್ರೆಸ್ ಇನ್ ಫಾರ್ಮೇಷನ್ ಬ್ಯೂರೋ ಫ್ಯಾಕ್ಟ್ ಚೆಕ್ ಪ್ರಕಾರ, ಪ್ರಧಾನಮಂತ್ರಿಯವರು ಅಂತಹ ಯಾವುದೇ ಘೋಷಣೆ ಮಾಡಿಲ್ಲ. ದಯವಿಟ್ಟು ಅಂತಹ ದಾರಿ ತಪ್ಪಿಸುವ ಸಂದೇಶಗಳನ್ನು ಹಂಚಿಕೊಳ್ಳಬೇಡಿ. ಕೊರೊನಾ ತಡೆಗಟ್ಟಲು ಮಾರ್ಗಗಳನ್ನು ಅನುಸರಿಸಬೇಕು ಎಂದು ತಿಳಿಸಲಾಗಿದೆ.
ಐಸಿಎಂಆರ್ ಕೋವಿಡ್ ಮೂರನೇ ಅಲೆ ತಡವಾಗಿ ಬರುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದ್ದು, ದೇಶದ ಜನರ ರೋಗನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ನೀಡುವ ಬಗ್ಗೆ ತಿಳಿಸಿದೆ.