ಭಾರತೀಯ ಕಂಪನಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಪರಿಣಾಮಕಾರಿಯಾಗಿದೆ ಎಂಬ ಅಂಶವನ್ನೂ ಅಮೆರಿಕ ಒಪ್ಪಿಕೊಂಡಿದೆ. ಕೊವಾಕ್ಸಿನ್ ಪ್ರಮಾಣವನ್ನು ತೆಗೆದುಕೊಂಡ ನಂತರ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳು COVID-19 ರ ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳ ವಿರುದ್ಧ ಹೋರಾಡಲು ಪರಿಣಾಮಕಾರಿ ಎಂದು ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ತನ್ನ ತನಿಖೆ ನಂತ್ರ ಹೇಳಿದೆ.
ಕೊವಾಕ್ಸಿನ್ ಲಸಿಕೆ ತೆಗೆದುಕೊಂಡವರ ರಕ್ತದ ಸಿರಮ್ ಬಗ್ಗೆ ನಡೆದ ಎರಡು ಅಧ್ಯಯನದಲ್ಲಿ ಇದು ಗೊತ್ತಾಗಿದೆ. ಅವರ ದೇಹದಲ್ಲಿ ಉತ್ಪತ್ತಿಯಾಗುವ ರೋಗ ನಿರೋಧಕ ಶಕ್ತಿ, ಬ್ರಿಟನ್ ಹಾಗೂ ಭಾರತದಲ್ಲಿ ಕಾಣಿಸಿಕೊಂಡ ಬಿ.1.1.7 ಅಲ್ಫಾ ಮತ್ತು ಬಿ.1.617 ಡೆಲ್ಟಾ ವಿರುದ್ಧ ಹೋರಾಡುವ ಶಕ್ತಿ ಹೊಂದಿವೆ ಎಂಬುದು ಪತ್ತೆಯಾಗಿದೆ. ಕೊವಾಕ್ಸಿನ್ ಮೂರನೇ ಹಂತದ ಪ್ರಯೋಗದ ವರದಿ ಇನ್ನೂ ಪ್ರಕಟವಾಗಿಲ್ಲ. ಎರಡನೇ ಹಂತದ ಪ್ರಯೋಗದ ಫಲಿತಾಂಶ ಉತ್ತಮವಾಗಿದೆ.
ಕೊವಾಕ್ಸಿನ್‌ನ ಮೂರನೇ ಹಂತದ ಪ್ರಯೋಗದ ಮಧ್ಯಂತರ ಫಲಿತಾಂಶಗಳ ಪ್ರಕಾರ, ಈ ಲಸಿಕೆ ರೋಗಲಕ್ಷಣದ ಪ್ರಕರಣಗಳಲ್ಲಿ ಶೇಕಡಾ 78 ರಷ್ಟು ಮತ್ತು ಲಕ್ಷಣರಹಿತ ಪ್ರಕರಣಗಳಲ್ಲಿ ಶೇಕಡಾ 70 ರಷ್ಟು ಪರಿಣಾಮಕಾರಿಯಾಗಿದೆ. ಕೊರೊನಾ ತೀವ್ರತರವಾದ ಪ್ರಕರಣಗಳಲ್ಲಿ ಇದು ಶೇಕಡಾ 100 ರಷ್ಟು ಪರಿಣಾಮಕಾರಿಯಾಗಿದೆ. ಅಮೆರಿಕಾ ವೈದ್ಯರು ಕೊವಾಕ್ಸಿನ್ ಲಸಿಕೆಯನ್ನು ಹೊಗಳಿದ್ದಾರೆ. ಭಾರತದಲ್ಲಿ ತಯಾರಾದ ಕೊವಾಕ್ಸಿನ್ ಕೊರೊನಾದ 617 ರೂಪಾಂತರಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ.
ಕೊವಾಕ್ಸಿನನ್ನು ಸತ್ತ ಕೊರೊನಾ ವೈರಸ್ ನಿಂದ ತಯಾರಿಸಲಾಗುತ್ತದೆ. ಇದು ವೈರಸ್ ವಿರುದ್ಧ ಹೋರಾಡಲು ದೇಹದಲ್ಲಿ ಸಾಕಷ್ಟು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.