ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗುಂಡಿಮಾಳ ಗ್ರಾಮದಲ್ಲಿ ಶೌಚಾಲಯದ ಗುಂಡಿಯಲ್ಲಿ ವ್ಯಕ್ತಿಯ ಮೃತದೇಹ ಕಂಡು ಬಂದಿದೆ. ಆತನ ಪತ್ನಿ, ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಕೆಲವು ವರ್ಷಗಳ ಹಿಂದೆ ಗುಂಡಿ ಮಾಳದ ರಾಜಶೇಖರ ಮೂರ್ತಿ ಮದುವೆಯಾಗಿದ್ದು, ಆತನ ಪತ್ನಿ ಎದುರು ಮನೆಯ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಈ ವಿಚಾರಕ್ಕೆ ಜಗಳವಾಡಿ ತವರು ಸೇರಿಕೊಂಡಿದ್ದು, ರಾಜೀಪಂಚಾಯಿತಿ ನಡೆಸಿದ ನಂತರ ಮನೆಗೆ ಮರಳಿದ್ದಾಳೆ. ನಾಲ್ಕು ದಿನಗಳ ಹಿಂದೆ ರಾಜಶೇಖರ್ ನಾಪತ್ತೆಯಾಗಿದ್ದು, ಅವರ ತಂದೆ ಹನೂರು ಪೊಲೀಸರಿಗೆ ದೂರು ನೀಡಿದ್ದರು.
ಶೌಚಾಲಯದ ಗುಂಡಿಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಶೌಚಾಲಯದ ಗುಂಡಿಯೊಳಗೆ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ರಾಜಶೇಖರಮೂರ್ತಿ ಮೃತದೇಹ ಕಂಡು ಬಂದಿದೆ. ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.