ವಿಜಯಪುರ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಜೊತೆಗೆ ನಾನು ಸದಾ ಕಾಲ ಇರುತ್ತೇನೆ ಎಂದು ವಿಜಯಪುರದಲ್ಲಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಯತ್ನಾಳ್ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತೇನೆ. ಯತ್ನಾಳ್ ಅವರ ಧ್ವನಿಗೆ ಧ್ವನಿಯಾಗಿ ಇರುತ್ತೇನೆ. ಮುಂದೆ ಪಕ್ಷದಲ್ಲಿ ಯತ್ನಾಳ್ ಅವರಿಗೆ ಸೂಕ್ತ ಸ್ಥಾನಮಾನ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಯತ್ನಾಳ್ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಸಿಗಲಿ, ಈ ಭಾಗದಲ್ಲಿ ಹೆಚ್ಚಿನ ಕೆಲಸ ಮಾಡಲು ನಮ್ಮ ಪಕ್ಷ ಅವಕಾಶ ನೀಡುತ್ತದೆ ಎಂಬ ಆಶಾಭಾವನೆ ನನಗಿದೆ. ಯತ್ನಾಳ್ ಅವರು ನನಗೆ ಸ್ನೇಹಿತರಾಗಿದ್ದಾರೆ. ನಾನು ಯತ್ನಾಳ್ ಪರವಾಗಿ ಇರುತ್ತೇನೆ ಎಂದು ಹೇಳಿದ್ದಾರೆ.
ಯತ್ನಾಳ್ ಅವರು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ್ದರು. ಸಿ.ಪಿ. ಯೋಗೇಶ್ವರ್ ಕೂಡ ಇದೇ ರೀತಿ ಹೇಳಿಕೆ ನೀಡಿದ್ದರಾದರೂ ನಂತರ ದಾಟಿ ಬದಲಿಸಿದ್ದರೆನ್ನಲಾಗಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬಂದು ಹೋದ ನಂತರ ನಾಯಕತ್ವ ಬದಲಾವಣೆ ಗೊಂದಲಗಳಿಗೆ ತೆರೆ ಬಿದ್ದಿದೆ ಎಂದು ಹೇಳಲಾಗಿತ್ತು. ಆದರೆ, ಯತ್ನಾಳ್ ಪರವಾಗಿ ಯೋಗೇಶ್ವರ್ ಬ್ಯಾಟಿಂಗ್ ಮಾಡಿರುವುದು ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ ಎನ್ನಲಾಗಿದೆ.