ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ. ಆದ್ರೆ ಡೆಲ್ಟಾ ಪ್ಲಸ್ ಭಯ ಹುಟ್ಟಿಸಿದೆ. ಕೊರೊನಾ ಮೂರನೇ ಅಲೆ ಬಗ್ಗೆ ಜನರಲ್ಲಿ ಭಯವಿದ್ದು, ಲಸಿಕೆ ಅಭಿಯಾನ ಚುರುಕು ಪಡೆದಿದೆ. ಈ ಮಧ್ಯೆ ಮಾಡರ್ನಾ ಲಸಿಕೆ ಶೀಘ್ರವೇ ಭಾರತಕ್ಕೆ ಬರಲಿದೆ. 18 ವರ್ಷ ಮೇಲ್ಪಟ್ಟವರಿಗೆ ತುರ್ತು ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಅನುಮೋದನೆ ಸಿಗುವ ಸಾಧ್ಯತೆಯಿದೆ.
ಮಾಡರ್ನಾ, ಭಾರತದಲ್ಲಿ ಕೋವಿಡ್ -19 ಲಸಿಕೆಗಾಗಿ ಅನುಮೋದನೆ ಕೋರಿದೆ. ಸಿಪ್ಲಾ, ಲಸಿಕೆಯ ಆಮದು ಮತ್ತು ಮಾರುಕಟ್ಟೆ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸಿದೆ. ಕೊವ್ಯಾಕ್ಸ್ ಮೂಲಕ ಕೋವಿಡ್ ಲಸಿಕೆಯ ಪ್ರಮಾಣವನ್ನು ಭಾರತ ಸರ್ಕಾರಕ್ಕೆ ದಾನ ಮಾಡಲು ಅಮೆರಿಕ ಸರ್ಕಾರ ಒಪ್ಪಿಕೊಂಡಿದೆ ಎಂದು ಮಾಡರ್ನಾ ಹೇಳಿದೆ. ಈ ಲಸಿಕೆಗಳಿಗೆ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ನಿಂದ ಅನುಮೋದನೆ ಕೋರಲಾಗಿದೆ.
ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಆದಷ್ಟು ಬೇಗ ದೇಶದ ಜನತೆಗೆ ಕೊರೊನಾ ಲಸಿಕೆ ನೀಡುವುದು ಸರ್ಕಾರದ ಗುರಿಯಾಗಿದೆ. ಕೊರೊನಾ ಎರಡನೇ ಅಲೆ ಕಡಿಮೆಯಾಗಿದೆ. ಆದ್ರೆ ಮೊದಲ ಮತ್ತು ಎರಡನೇ ಅಲೆ ನಡುವಿನ ಅಂಕಿಅಂಶ ಆಘಾತಕಾರಿಯಾಗಿದೆ. ಮೊದಲ ಅಲೆಗಿಂತ ಶೇಕಡಾ 40ರಷ್ಟು ಮಂದಿ ಎರಡನೇ ಅಲೆಯಲ್ಲಿ ಸಾವನ್ನಪ್ಪಿದ್ದಾರೆ. ಹಾಗಾಗಿ ಎರಡನೇ ಅಲೆ ಮುಗಿಯುತ್ತಿದ್ದಂತೆ ನಿರ್ಲಕ್ಷ್ಯ ಸಲ್ಲದು. ಆದಷ್ಟು ಕಟ್ಟುನಿಟ್ಟಿನ ಕ್ರಮ ಪಾಲನೆ ಮಾಡಬೇಕೆಂದು ಸರ್ಕಾರ ಹೇಳಿದೆ.